ಸುಳ್ಯ: ಸುಮಾರು 60,000 ಖಾಲಿ ಹಾಳೆಗಳು ಈ ಬಾರಿ ಗುಜರಿ ಸೇರುತ್ತಿದ್ದು ತಪ್ಪಿದೆ….!. ಎಲ್ಲೋ ಎಸೆದು ಗುಜರಿ ಅಂಗಡಿ ಸೇರುತ್ತಿದ್ದ ಪುಸ್ತಕದ ಖಾಲಿ ಹಾಳೆಗಳು ಒಂದಾಗಿ 100 ಪುಟದ ಸುಮಾರು 600 ಪುಸ್ತಕಗಳಾದವು. ಇದು ಬಡ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳಾದವು. ಯುವ ಬ್ರಿಗೆಡ್ ಈ ಕಾರ್ಯ ಮಾದರಿಯಾಯ್ತು. ಈ ಯೋಜನೆಯ ಹೆಸರು “ನೋಟ್ ಪ್ಯಾಡ್ ಮ್ಯಾನ್”.
ಖಾಲಿ ಹಾಳೆಗಳೆಂದು ಎಸೆದು ಬಿಡಬೇಡಿ. ಸಂಗ್ರಹಿಸಿ ಇಡಿ. ಅದು ಪುಸ್ತಕವಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯವಾಗುತ್ತದೆ. ಪರಿಸರವೂ ಉಳಿಯುತ್ತದೆ.ಇಂತಹದ್ದೊಂದು ವಿಶೇಷ ಯೋಚನೆಯನ್ನು ಯುವ ಬ್ರಿಗೆಡ್ ಮಾಡಿದೆ. ಇಲ್ಲಿ 60 ಸಾವಿರ ಖಾಲಿ ಹಾಳೆಗಳು ಸಿಕ್ಕಿದೆ…!. ಪ್ರತೀ ವರ್ಷದ ಕೊನೆಗೆ ಶಾಲೆಯ ಮಕ್ಕಳು ಬರೆದು ಪುಸ್ತಕ ಮರುವರ್ಷ ಗುಜರಿ ಅಂಗಡಿ ಸೇರುತ್ತವೆ. ಅನೇಕ ಪುಸ್ತಕಗಳಲ್ಲಿ ಕೆಲವು ಖಾಲಿ ಹಾಳೆಗಳು ಹಾಗೆಯೇ ಉಳಿದಿರುತ್ತದೆ. ಅದು ಯಾರಿಗೂ ಉಪಯೋಗವಾಗದೇ ಇರುತ್ತದೆ. ಯುವ ಬ್ರಿಗೆಡ್ ರಾಜ್ಯದ ವಿವಿದೆಡೆ ಇದನ್ನೇ ಒಂದು ಉಪಯೋಗವಾಗುವಂತೆ ಮಾಡಿತು.
ಯುವಬ್ರಿಗೇಡ್ ಸುಳ್ಯ ತಾಲೂಕು ತಂಡವೂ ಸುಳ್ಯದಲ್ಲಿ ಮಾದರಿ ಕಾರ್ಯ ಮಾಡಿದೆ. ಕಳೆದ ಒಂದು ವರ್ಷದಿಂದ ಶಾಲಾ ಮಕ್ಕಳು ಬರೆದು ಬಿಟ್ಟ ಪುಸ್ತಕದಲ್ಲಿ ಉಳಿದ ಖಾಲಿ ಪುಟಗಳನ್ನು ಸಂಗ್ರಹ ಮಾಡಿ ಅದನ್ನು ಮತ್ತೆ ಜೋಡಿಸಿ ಒಂದು ಸುಂದರವಾದ ಮುಖ ಪುಟವನ್ನು ಹಾಕಿ ಅದನ್ನು ಆಯ್ದ ಬಡ ಮಕ್ಕಳಿಗೆ ಹಂಚುವ ಕೆಲಸವನ್ನು ಮಾಡುತ್ತಿದೆ. ಇದರಿಂದ ಸಾಮಾನ್ಯವಾಗಿ ಗುಜರಿಗೆ ಹೋಗುವ ಹಾಳೆಗಳು ಮರು ಉಪಯೋಗ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಕಾರ್ಯವೂ ನಡೆಯಿತು, ಬಡಮಕ್ಕಳಿಗೆ ಪುಸ್ತಕವೂ ಲಭಿಸಿತು. ಇದಕ್ಕಾಗಿ ಕಳೆದ ವರ್ಷದ ಕೊನೆಗೆ ವಿವಿಧ ಶಾಲೆಗಳಿ ಈ ತಂಡ ತೆರಳಿತು, ಖಾಲಿ ಹಾಳೆಗಳನ್ನು ಮಾತ್ರಾ ಸಂಗ್ರಹಿಸಿತು. ಪುಸ್ತಕವನ್ನು ಮರುಜೋಡಣೆ ಮಾಡಿತು. ಆಗ 100 ಪುಟದ 600 ಪುಸ್ತಕಗಳಾದವು.
ಗೂನಡ್ಕದ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯುವಬ್ರಿಗೇಡ್ ವತಿಯಿಂದ ಸಂಗ್ರಹಿಸಿದ ಈ ಪುಸ್ತಕಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಯುವಬ್ರಿಗೇಡ್ ನ ಸದಸ್ಯರು ಭಾಗವಹಿಸಿದ್ದರು. ಯುವಬ್ರಿಗೇಡ್ ಈ ಕೆಲಸಕ್ಕಾಗಿ ಶಾಲೆ ಕಾಲೇಜಿಗೆ ಭೇಟಿ ಕೊಟ್ಟು ಮನವಿ ಮಾಡಿ ಪುಸ್ತಕಗಳಿಂದ ಖಾಲಿ ಹಾಳೆ ಸಂಗ್ರಹಿಸಿ ಸುಳ್ಯದ ಗಣೇಶ್ ಪ್ರಿಂಟರ್ಸ್ ಮಾಲಕರು ಇದನ್ನು ಸುಂದರವಾಗಿ ಜೋಡಿಸಿ ಕೊಟ್ಟರು.
ಸದ್ದಿಲ್ಲದೆ ಕಾರ್ಯ ಮಾಡಿದ ಯುವ ಬ್ರಿಗೆಡ್ :
“ಮಾತಿಲ್ಲದೆ ಕೆಲಸ – ಟೀಕೆ ಇಲ್ಲದೆ ಉತ್ತರ” ಇದಕ್ಕಾಗಿ ಯುವ ಬ್ರಿಗೆಡ್ ಮಾದರಿಯಾಗಿದೆ. ಯುವಕರನ್ನು ರಚನಾತ್ಮಕವಾಗಿ ಬೆಳೆಸುತ್ತಿದೆ, ಸಮಾಜದ ಪರ ಚಿಂತಿಸುವ ಕಾರ್ಯದಲ್ಲಿ ಯುವ ಬ್ರಿಗೆಡ್ ಹೆಜ್ಜೆ ಇಟ್ಟಿದೆ. ಋಣಾತ್ಮಕವಾಗಿ ಚಿಂತಿಸುವ ಬದಲು ರಚನಾತ್ಮಕವಾಗಿ ಯೋಚಿಸುವ ಮನಸ್ಥಿತಿಯನ್ನು ಯುವ ಬ್ರಿಗೆಡ್ ಯುವಕರಲ್ಲಿ ಬೆಳೆಸುತ್ತಿದೆ.
ಇಂತಹ ಯುವ ಬ್ರಿಗೇಡ್ ಸುಳ್ಯಕ್ಕೆ ಇಂದಿಗೆ ತನ್ನ 5 ನೇ ವರ್ಷ ಪೂರೈಸಿದೆ. ಕಳೆದ ಐದು ವರ್ಷಗಳಲ್ಲಿ ಯುವ ಬ್ರಿಗೇಡ್ ತನ್ನದೇ ಆದ ರೀತಿಯಲ್ಲಿ ರಾಜ್ಯದಲ್ಲಿ ವಿಶಿಷ್ಠವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಇದರಲ್ಲಿ ಸುಳ್ಯ ತಾಲೂಕು ಯುವ ಬ್ರಿಗೇಡ್ ತಂಡವುಕಳೆದ ಐದು ವರ್ಷಗಳಲ್ಲಿ ವಿನೂತನವಾದ ಕಾರ್ಯಕ್ರಮವನ್ನು ನಡೆಸುತ್ತಿದೆ. ಆರಂಭದ ದಿವಸಗಳಲ್ಲಿ ಕಾರ್ಗಿಲ್ ವಿಜಯೋತ್ಸವ ಎಂಬ ಕಾರ್ಯಕ್ರಮದ ಮೂಲಕ ನಮ್ಮ ದೇಶದ ಗಡಿ ಕಾಯುವಯೋಧರನ್ನು ನೆನಪಿಸುವ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಮತ್ತು ರಾಜ್ಯಾದ್ಯಂತ ಹಮ್ಮಿಕೊಂಡಿತ್ತು .
ಪರಿಸರದ ಉಳಿವಿಗಾಗಿ ಹಾಗೂ ನದಿಗಳ ಸ್ವಚ್ಛತೆಗೆ ಯುವ ಬ್ರಿಗೇಡ್ ವಿಶಿಷ್ಟ ಕಾರ್ಯಕ್ರಮ ಮಾಡಿದೆ. ಅದರಲ್ಲಿ ಸುಳ್ಯದ ಪಯಸ್ವಿನಿ ನದಿಯ ಸ್ವಚ್ಛತೆ, ಕಟೀಲಿನ ನಂದಿನಿ ನದಿ, ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಧಾರಾ ನದಿಯ ಸ್ವಚ್ಛತೆ, ಧರ್ಮಸ್ಥಳದ ನೇತ್ರಾವತಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ನ ಕಾರ್ಯಕರ್ತರು ಭಾಗವಹಿಸಿದ್ದರು.
ಸ್ವಚ್ಚ ರಾಜಮಾರ್ಗ ಕಲ್ಪನೆಯಲ್ಲಿ ತಾಲೂಕಿನ ಹೆದ್ದಾರಿಯ ಸ್ವಚ್ಛತೆಯನ್ನುವಿವಿಧ ಹಂತಗಳಲ್ಲಿ ಮಾಡಲಾಯಿತು ಮತ್ತು ಈ ಸಂದರ್ಭದಲ್ಲಿ ಟನ್ನುಗಳಷ್ಟು ಕಸವನ್ನು ರಾಜ್ಯಹೆದ್ದಾರಿಯಿಂದ ಹೆಕ್ಕಿವಿಲೇವಾರಿ ಮಾಡಲಾಗಿತ್ತು.
ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಆರೋಗ್ಯಯುತವಾದ ಹಣ್ಣುಗಳು ಸಿಗುವ ಉದ್ದೇಶದಿಂದ ಯುವ ಬ್ರಿಗೇಡ್ “ಮಿಡ್ ಡೇ ಫ್ರೂಟ್ಸ್ ” ಎಂಬ ವಿನೂತನ ಕಾರ್ಯಕ್ರಮದಲ್ಲಿ ತಾಲೂಕಿನ ಶಾಲೆಗಳಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಮಾಡಿ ಯಶಸ್ವಿಯಾಗಿತ್ತು.
“ನಮ್ಮ ಗ್ರಾಮ ಸ್ವಚ್ಛ ಗ್ರಾಮ” ಎಂಬ ಕಲ್ಪನೆಯಲ್ಲಿ ನಮ್ಮ ಗ್ರಾಮಗಳಲ್ಲಿನ ನಿರ್ವಹಣೆ ಇಲ್ಲದೇ ಪಾಳು ಬಿದ್ದ ಬಸ್ಸು ನಿಲ್ದಾಣಗಳನ್ನು ಸ್ವಚ್ಛ ಮಾಡಿ ಪೈಂಟ್ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು.
ತುರ್ತು ಸಂದರ್ಭದಲ್ಲಿ ರಕ್ತ ಕೊರತೆಯಾದಾಗ ಯುವ ಬ್ರಿಗೇಡ್ ತನ್ನ ಯುವ ಬ್ರಿಗೇಡ್ ರಕ್ತನಿಧಿಯಿಂದ ಇಲ್ಲಿಯವರೆಗೆ ಸುಮಾರು ಐನೂರಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಕೊಡುತ್ತಾ ಬಂದಿದೆ.
ಶಾಲಾ ಮತ್ತು ಕಾಲೇಜಿನ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಧಕರ ವಿಡಿಯೋಗಳನ್ನು ಮಾಡಿ ಪ್ರದರ್ಶನ ಮಾಡಲಾಗುತ್ತಿದೆ.
ಕಳೆದ ಬಾರಿ ಮಡಿಕೇರಿಯಲ್ಲಿ ನಡೆದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಪಾಜೆ ಭಾಗದಲ್ಲಿ ನಿರಾಶ್ರಿತರಾಗಿದ್ದ ನೂರಾರು ಕುಟುಂಬಗಳಿಗೆ ತುರ್ತು ಸಹಾಯ ಹಾಗೂ ಸಾಮಗ್ರಿಗಳನ್ನು ನೀಡಿದೆ.
“ಪೃಥ್ವಿ ಯೋಗ ” ಎಂಬ ವಿನೂತನ ಕಾರ್ಯಕ್ರಮದ ಮುಖಾಂತರ ಮನೆಮನೆಗಳಿಗೆ ಗಿಡಗಳನ್ನು ಕೊಂಡೊಯ್ದು ನಾವೇ ನೆಟ್ಟು ಬರುವಂತಹ ಕಾರ್ಯಕ್ರಮ ಮಾಡುತ್ತಿದೆ. ಇದು ಪರಿಸರದ ಉಳಿವಿಗಾಗಿ ಒಂದು ವಿನೂತನ ಪ್ರಯತ್ನ.
“ನೋಟ್ ಪ್ಯಾಡ್ ಮ್ಯಾನ್ ” ಎಂಬ ವಿನೂತನ ಕಲ್ಪನೆಯಲ್ಲಿ ಶಾಲೆಯ ಮಕ್ಕಳು ತಮ್ಮ ಶಾಲೆಯ ಕೊನೆಯ ಅವಧಿಯಲ್ಲಿ ಬರೆದು ಬಿಟ್ಟ ನೋಟ್ ಬುಕ್ಕಿನ ಖಾಲಿ ಹಾಳೆಗಳನ್ನು ಸಂಗ್ರಹಿಸಿ ಪುನಹ ಅದನ್ನು ಬುಕ್ಕುಗಳಾಗಿ ಆಗಿ ಪರಿವರ್ತಿಸಿ ಬಡಮಕ್ಕಳಿಗೆ ಹಂಚುವ ಕೆಲಸ ಮಾಡುತ್ತಿದೆ ಹಾಗೂ ಇದರಿಂದ ಬರೆಯದೆ ನಷ್ಟವಾಗುವ ಪುಟಗಳನ್ನು ಗುಜರಿಗೆ ಹಾಕುವ ಬದಲು ಮರು ಉಪಯೋಗಿಸಿ ಪುಸ್ತಕಕ್ಕಾಗಿ ಮರಗಳನ್ನು ಕಡಿಯುವುದನ್ನು ತಪ್ಪಿಸಿ ಪರಿಸರವನ್ನು ಉಳಿಸುವ ಒಂದು ಸಣ್ಣ ಪ್ರಯತ್ನವೂ ಇದಾಗಿದೆ. ಕಾಲೋನಿ ಯಲ್ಲಿನ ಬಡವರಿಗೆ ನೀರು ಸರಬರಾಜು ಸರಿಯಾಗಿ ಆಗದ ಸಂದರ್ಭದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ನೀರಿನ ಪೈಪ್ ಗಳನ್ನು ಸರಿ ಪಡಿಸಿ ಸಮಸ್ಯೆ ಗಳನ್ನು ಬಗೆಹರಿಸಲಾಗಿದೆ.
“ಕಣಕಣದಲ್ಲೂ ಶಿವ” ಎಂಬ ಕಾರ್ಯಕ್ರಮ ದಲ್ಲಿ ರಸ್ತೆ ಮತ್ತು ಅರಳಿ ಕಟ್ಟೆಯ ಸುತ್ತ ಬಿಟ್ಟು ಹೋದ ಹಳೆಯ ದೇವರ ಫೋಟೋ ಗಳನ್ನು ಸಂಗ್ರಹಿಸಿ ಅದರ ಚಿತ್ರ ಗಾಜು ಹಾಗೂ ಫ್ರೇಮ್ ಗಳನ್ನು ಸೂಕ್ತ ರೀತಿಯಲ್ಲಿ ಬೇರ್ಪಡಿಸಿ ವಿಲೇವಾರಿ ಮಾಡುವ ಮೂಲಕ ಪೂಜಿಸಲ್ಪಟ್ಟ ಫೋಟೋ ಗಳಿಗೆ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಕೆಲಸ ಮಾಡಿದೆ.
“ವಿವೇಕ ಮಾಲೆ” ಎಂಬ ಕಾರ್ಯಕ್ರಮದಲ್ಲಿ ಸುಮಾರು ಒಂದು ತಿಂಗಳ ಕಾಲ ವಿವೇಕಾನಂದ ರ ಚಿತ್ರ ಇರುವ ಮಾಲೆ ಧರಿಸಿ ಅವರ ಪುಸ್ತಕ ಓದುವುದು, ವ್ಯಾಯಾಮ ಹಾಗೂ ತಿಂಗಳ ಕೊನೆಗೆ ಕನ್ಯಾಕುಮಾರಿ ಯ ವಿವೇಕಾನಂದ ಬಂಡೆ ಯ ಸಂದರ್ಶನ ದ ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ಯುವಬ್ರಿಗೇಡ್ ಸುಳ್ಯ ತಾಲೂಕು ತಂಡ ಈಗಾಗಲೇ ತನ್ನ ಎರಡು ಸಹ ಗ್ರಾಮೀಣ ತಂಡಗಳಾದ ಯುವಬ್ರಿಗೇಡ್ ಬಾರ್ಪಣೆ ಹಾಗೂ ಯುವಬ್ರಿಗೇಡ್ ಅಮರಮಡ್ನೂರು ತಂಡ ಗಳ ಜೊತೆಯಾಗಿ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
“ಸುಳ್ಯ ತಾಲೂಕಿನಲ್ಲಿ ಇನ್ನಷ್ಟು ಕೆಲಸ ಕಾರ್ಯಗಳನ್ನು ಯುವ ಬ್ರಿಗೆಡ್ ತಂಡ ಮಾಡಲಿದೆ. ಈ ಕೆಲಸ ನಿರಂತರ. ಪುಸ್ತಕ ವಿತರಣೆಯ ಕಾರ್ಯ ತೃಪ್ತಿ ತಂದಿದೆ” ಎಂದು ಹೇಳುತ್ತಾರೆ ಸುಳ್ಯ ಯುವ ಬ್ರಿಗೆಡ್ ನ ಶರತ್ .