ಗಡಿಯಲ್ಲಿ ಗಜಪಡೆಗಳ ಮ್ಯಾರಥಾನ್….!

June 15, 2019
8:00 AM

ಸುಳ್ಯ: ಆನೆಗಳ ಮ್ಯಾರಥಾನ್…!. ಹೌದು ಇದು ಆನೆಗಳದ್ದೇ ಮ್ಯಾರಥಾನ್.  ಇದು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ನಡೆಯುವ ಮ್ಯಾರಥಾನ್..!

Advertisement

ಒಮ್ಮೆ ಆ ಹಿಂಡು ಹಿಂಡಾಗಿ ಕೇರಳದತ್ತ… ಕೆಲವು ದಿನಗಳ ಬಳಿಕ ಅಲ್ಲಿಂದ ಮರಳಿ ಕರ್ನಾಟಕದತ್ತ. ಹೀಗೆ ಕೇರಳ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಗಜಪಡೆಗಳ ಮ್ಯಾರಥಾನ್ ಸುಳ್ಯದ ಗಡಿ ಗ್ರಾಮಗಳಲ್ಲಿ ಮಾತ್ರ ಕಂಡು ಬರುವ ವಿಶೇಷತೆ. ಮಂಡೆಕೋಲು ಗಡಿಯಿಂದ ಆರಂಭಗೊಂಡು ದೇಲಂಪಾಡಿ, ಅಡೂರು, ಪಾಂಡಿ, ಮುಳ್ಳೇರಿಯ, ಕಾರಡುಕ್ಕ ವರೆಗೂ ಮುಂದುವರಿಯುವ ಮ್ಯಾರಥಾನ್ ಓಟ ಈಕಡೆ ಗಡಿ ದಾಟಿ ಮಂಡೆಕೋಲು.. ಅಜ್ಜಾವರ, ಆಲೆಟ್ಟಿ ವರೆಗೆ ಕೆಲವೊಮ್ಮೆ ಸುಳ್ಯ ನಗರದವರೆಗೂ ಮುಂದುವರಿಯುತ್ತದೆ. ಸಲಗಗಳು ಗಡಿ ಗ್ರಾಮಗಳನ್ನು ರಹದಾರಿಯಾಗಿಸಿ ತಮ್ಮ ಓಟವನ್ನು ಮುಂದುವರಿಸುತ್ತಿದ್ದರೆ ಗಜ ಹೆಜ್ಜೆಗೆ ಸಿಲುಕಿ ಗಡಿ ಗ್ರಾಮಗಳು ನಲುಗಿ ಹೋಗಿದೆ.

ಹೌದು, ಸುಳ್ಯ ತಾಲೂಕಿನ ಗಡಿ ಗ್ರಾಮವಾದ ಮಂಡೆಕೋಲಿನಲ್ಲಿ ಭೀತಿ ಹುಟ್ಟಿಸಿ ಕಾಡಾನೆಗಳ ಓಡಾಟ ಮತ್ತೆ ಅಧಿಕವಾಗಿದೆ. ಕಳೆದ ಐದು ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಕಾಡಾನೆ ಹಾವಳಿಯಿಂದ ನಲುಗಿರುವ ಮಂಡೆಕೋಲಿನ ವಿವಿಧ ಭಾಗಗಳಲ್ಲಿ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸುತ್ತಿದ್ದು ಕಳೆದ ಒಂದು ವಾರದಿಂದ ಗಜಪಡೆಗಳ ಉಪಟಳ ಅಧಿಕವಾಗಿದೆ. ಪರಪ್ಪೆ ಅರಣ್ಯ ಭಾಗದಿಂದ ಬಂದ ಆನೆಗಳು ಕಳೆದ ಕೆಲವು ದಿನಗಳಿಂದ ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ ಓಡಾಡಿ ಗ್ರಾಮದಲ್ಲಿ ಭೀತಿಯ ವಾತಾವರಣ ಉಂಟು ಮಾಡಿದೆ. ಮಂಡೆಕೋಲು ಗ್ರಾಮದ ಕನ್ಯಾನ, ಕಲ್ಲಡ್ಕ, ಪೆರಾಜೆ ಅಕ್ಕಪ್ಪಾಡಿ ಭಾಗಕ್ಕೆ ದಾಂಗುಡಿಯಿಟ್ಟ ಆನೆಗಳ ಹಿಂಡು ಕೆಲವು ಕಡೆಗಳಲ್ಲಿ ಕೃಷಿ ತೋಟದತ್ತ ನುಗ್ಗಿ ಕೃಷಿ ನಾಶಪಡಿಸಿದರೆ ಕಲ್ಲಡ್ಕದ ಶಾಲಾ ಗ್ರೌಂಡ್‍ನಲ್ಲೇ ಒಂದು ರಾತ್ರಿ ತಂಗಿ ಮರಳಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸುದ್ದರೂ ಆನೆಗಳಿಗೆ ಅದು ಮಾಮೂಲಿ ಎಂಬಂತಾಗಿದೆ. ಸಾರ್ವಜನಿಕರು ಪಟಾಕಿ ಸಿಡಿಸಿ, ಚೆಂಡೆ, ತಮಟೆ ಬಾರಿಸಿ, ಬೆಂಕಿ ಉರಿಸಿ ಆನೆಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನ ನಡೆಸಿದಾಗ ಆನೆಗಳ ಹಿಂಡು ಕ್ಯಾರೇ ಅನ್ನುತ್ತಿಲ್ಲ.

 


ಕತ್ತಲು ಬೀಳುತ್ತಲೆ ಊರಿಗೆ ಬಂದು ಕೃಷಿ ತೋಟದತ್ತ ನುಗ್ಗಿ ಹೊಟ್ಟೆ ತುಂಬಿಸಿ ಸಮೀಪದ ಕಾಡಿಗೆ ವಿಶ್ರಾಂತಿಗೆ ತೆರಳುವ ಆನೆಗಳು ಹೊಟ್ಟೆ ಹಸಿದಾಗ ಮತ್ತೆ ನಾಡಿಗೆ ನುಗ್ಗಿ ಬರುತ್ತದೆ. ಆಕಡೆ ಈ ಕಡೆ ಓಡಾಡುವ ಆನೆಗಳು ಘೀಳಿಟ್ಟು ಜನರಲ್ಲಿ ಭಯದ ವಾತಾವರಣವನ್ನು ಸೃಷ್ಠಿಸುವುದು, ನದಿಯಲ್ಲಿ ಇಳಿದು ಜಳಕವಾಡುವುದು ಇಲ್ಲಿ ಮಾಮೂಲಿ ದೃಶ್ಯಗಳಾಗಿದೆ. ಮೂರು ಮರಿ ಆನೆಗಳು ಸೇರಿ ಬರೋಬರಿ 11 ಆನೆಗಳ ಹಿಂಡು ಪ್ರದೇಶದಲ್ಲಿ ಬೀಡು ಬಿಟ್ಟಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

Advertisement


ಕಳೆದ ಅನೇಕ ವರ್ಷದಿಂದೀಚೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶದ ಗ್ರಾಮಗಳು ಕಾಡಾನೆ ಹಾವಳಿಯಿಂದ ನಲುಗಿ ಹೋಗಿದೆ. ಆಗಿಂದಾಗೆ ನಾಡಿಗೆ  ಬರುವ ಕಾಡಾನೆಗಳ ಹಿಂಡು ಮಂಡೆಕೋಲು, ಆಲೆಟ್ಟಿ ಅಜ್ಜಾವರ ಮತ್ತು ನೆರೆಯ ಕೇರಳ ರಾಜ್ಯದ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದೆ. ಇದೀಗ ಮತ್ತೆ ಆನೆಗಳು ನಾಡಿನಲ್ಲಿ ಬೀಡು ಬಿಟ್ಟಿರುವುದರಿಂದ ಜನರಿಗೆ ಮತ್ತೆ ನಿದ್ರೆಯಿಲ್ಲದ ರಾತ್ರಿ ಬಂದೊದಗಿದೆ.

ಶಾಶ್ವತ ತಡೆ ಮರೀಚಿಕೆಯೇ..?

ಕಳೆದ ಹಲವು ವರ್ಷದಿಂದಲೂ ಅಧಿಕ ಸಮಯದಿಂದ ಮಂಡೆಕೋಲು, ಆಲೆಟ್ಟಿ, ಅಜ್ಜಾವರಗಳಲ್ಲಿ ಆನೆ ದಾಳಿ ಮುಂದುವರಿದಿದ್ದರೂ ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ. ಆನೆಗಳು ನಾಡಿಗೆ ಇಳಿಯದಂತೆ ಗ್ರಾಮದ ಸುತ್ತಲೂ ಆನೆ ಕಂದಕ, ಸೌರ ವಿದ್ಯುತ್ ಬೇಲಿ, ರೈಲ್ವೇ ಹಳಿಯ ಕಂಬಿಯ ಬೇಲಿ ನಿರ್ಮಾಣ ಹೀಗೆ ಹಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಲಾಗಿತ್ತು. ಈ ಗ್ರಾಮಗಳಲ್ಲಿ ಕೆಲವು ಭಾಗಗಳಲ್ಲಿ ಆನೆ ಕಂದಕಗಳನ್ನು ನಿರ್ಮಿಸಲಾಗಿದೆ. ಆದರೆ ಆನೆ ಹಾವಳಿ ಮಾತ್ರ ನಿಂತಿಲ್ಲ.. ಇದರಿಂದ ಮಂಡೆಕೋಲಿನ ಜನರು ಸದಾ ಗಜ ಭೀತಿಯಲ್ಲಿಯೇ ದಿನ ಕಳೆಯಬೇಕಾಗಿದೆ. ಆನೆಗಳ ಹಿಂಡು ಬಂದರೆ ಸಾರ್ವಜನಿಕರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿ-ಹಗಲು ಎನ್ನದೆ ದಿನ ಪೂರ್ತಿ ನಿದ್ರೆಗೆಟ್ಟು ಪಟಾಕಿ ಸಿಡಿಸಿ, ಟಯರ್ ಗೆ ಬೆಂಕಿ ಹಚ್ಚಿ, ತಮಟೆ, ಚೆಂಡೆ ಬಾರಿಸಿ ಆನೆಗಳನ್ನು ಅಟ್ಟುವುದು ಮಾತ್ರ ಉಳಿದಿರುವ ಉಪಾಯ. ಇದು ಒಂದೆರಡು ದಿನದ ಕಥೆಯಲ್ಲ ಹಲವು ವರ್ಷಗಳಿಂದ ಮಂಡೆಕೋಲಿನ ಜನತೆಯ ನಿರಂತರ ವ್ಯಥೆಯಾಗಿದೆ. ಆನೆ ಹಾವಳಿಯನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ರಾಜ್ಯ-ಕೇಂದ್ರ ಸರ್ಕಾರಗಳ ಕದ ತಟ್ಟಿದರೂ ಯಾವುದೇ ಪ್ರಯೋಜನವಾಗಿಲ್ಲ, ವಿದ್ಯಾರ್ಥಿನಿಯೋರ್ವಳು ಪ್ರಧಾನಿವರೆಗೆ ಪತ್ರ ಬರೆದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲು.

 

Advertisement
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಉತ್ತರಕನ್ನಡ, ಕೊಡಗಿನಲ್ಲಿ ಸಮಸ್ಯೆ
July 3, 2025
11:38 PM
by: The Rural Mirror ಸುದ್ದಿಜಾಲ
ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲಾ ಪ್ರದರ್ಶನ | ಐದು ಜನರ ಕಲಾವಿದರ ಕಲಾಕೃತಿಗಳ ಅನಾವರಣ
July 2, 2025
9:53 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group