ಗಣೇಶನ ಹಬ್ಬವೆಂದರೆ ಗೌಜಿ ಗದ್ಧಲಗಳಿಗೇನೂ ಕಮ್ಮಿಯಿರುವುದಿಲ್ಲ. ಗಣೇಶನ ಹಬ್ಬ ಮನೆಗಳಿಗೆ ಸೀಮಿತವಾಗಿಲ್ಲ. ಜನರಿಗೆ ಹತ್ತಿರವಾಗಿದ್ದಾನೆ. ಮನೆ ಮನದಲ್ಲಿ ತನ್ನ ಸ್ಥಾನವನ್ನು ಭದ್ರವಾಗಿ ಸ್ಥಾಪಿಸಿಕೊಂಡಿದ್ದಾನೆ. ಜಾತಿ ಮತ ಧರ್ಮಗಳನ್ನು ಮೀರಿ ಗಣೇಶ ನಿಂತಿದ್ದಾನೆ.
ಸಾರ್ವಜನಿಕ ಗಣೇಶೋತ್ಸವ ಒಂದು ಒಳ್ಳೆಯ ಉದ್ದೇಶದೊಂದಿಗೆ ಆರಂಭವಾಗಿತ್ತು. 1892 ರ ಸಮಯ ದೇಶ ಬ್ರಿಟಿಷ್ ರ ಆಳ್ವಿಕೆಯಲ್ಲಿತ್ತು. ಅಗಾಧವಾದ ಜಾತಿ ತಾರತಮ್ಯವೂ ಇತ್ತು. ಸಮಾಜದಲ್ಲಿ ಜನರಲ್ಲಿ ಒಗ್ಗಟ್ಟು ಇರಲಿಲ್ಲ. ಜಾತಿ ವೈಷಮ್ಯ , ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟಕ್ಕೆ ಒಂದಾಗಲು ದೊಡ್ಡ ಅಡ್ಡಿಯಾಗಿತ್ತು. ಇದರ ನಿವಾರಣೆಗಾಗಿ ಒಂದು ಉಪಾಯದ ಅಗತ್ಯ ಬಹುವಾಗಿತ್ತು. ಮನೆಯೊಳಗೆ, ದೇವಸ್ಥಾನಗಳಿ ಪೂಜಿಸಲ್ಪಡುತ್ತಿದ್ದ ಗಣಪನ ಆರಾಧನೆಯನ್ನು ಸಾರ್ವಜನಿಕವಾಗಿ ಎಲ್ಲರೂ ಒಟ್ಡಾಗಿ ಪೂಜಿಸಿದರೆ ಹೇಗೆ ಎಂಬ ಕಲ್ಪನೆ ಮುಖಂಡರನ್ನು ಕಾಡಿತು. ಆರಂಭಿಕವಾಗಿ 1892 ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೇಬ ಲಕ್ಷ್ಮಣ ಜವೇರಿಯವರು ಪ್ರಥಮ ಬಾರಿಗೆ ಸಾರ್ವಜನಿಕ ಗಣೇಶೋತ್ಸವ ಮಾಡಿದರು. ಇದರ ಬಗ್ಗೆ ಸ್ಪಷ್ಟ ಪರಿಕಲ್ಪನೆಯನ್ನು 1893 ರಲ್ಲಿ ತಮ್ಮ ಕೇಸರಿ ಪತ್ರಿಕೆಯಲ್ಲಿ ಪ್ರಕಟಿಸಿದರು. ಆಮೇಲೆ 1894 ರಲ್ಲಿ ಪುಣೆಯ ಕೇಸರಿವಾಡದಲ್ಲಿ ಅಧಿಕೃತವಾಗಿ ಸಾರ್ವಜನಿಕ ಗಣೇಶೋತ್ಸವ ಆರಂಭವಾಯಿತು. ಗಣೇಶೋತ್ಸವದಲ್ಲಿ ಜಾತಿ , ಮತ ಭೇದಗಳನ್ನು ಮರೆತು ಜನ ಒಂದಾದರು. ದೇವರ ಆರಾಧನಾ ಉತ್ಸವ ಜನರು ಒಗ್ಗೂಡಲು ಒಂದು ಕಾರಣವಾಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಧ್ಯೇಯ ವಾಕ್ಯದ ಅರ್ಥ ಜನರಲ್ಲಿ ಜಾಗೃತಿಯುಂಟು ಮಾಡಿತು. ನಾಯಕರ ಕನಸು ಈಡೇರಿತು.
ಬೀದಿ ಬೀದಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಆಸ್ಪತ್ರೆ, ಕಾರ್ಖಾನೆಗಳಲ್ಲಿ ಮೈದಾನ, ಪಾರ್ಕುಗಳಲ್ಲಿ ಗಣೇಶ ಚತುರ್ಥಿ ಸಂಭ್ರಮ ಸಡಗರದ ವಾತಾವರಣಕ್ಕೆ ಸಾಕ್ಷಿಯಾಗುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು , ಸ್ಪರ್ಧೆಗಳು ನಡೆಯುತ್ತವೆ. ಮಕ್ಕಳಿಗಾಗಿ 1950 ರ ಸುಮಾರಿಗೆ ಶಿಶು ಸಾಹಿತಿ ದಿ.ಡಾ.ಪಿಎಸ್ ಗಣಪಯ್ಯ ನವರು ರಚಿಸಿದ ‘ಚೌತಿ ಗಣಪ ‘ ಪದ್ಯವಿಲ್ಲಿದೆ. ಆ ದಿನಗಳಿಂದಲೂ ಮಕ್ಕಳಿಗೆ ಇಷ್ಟವಾದ ನೆಚ್ಚಿನ ಗೀತೆಯಾಗಿದೆ.
ಚೌತಿ ಗಣಪ ಶಿಶು ಗೀತೆ
ರಚನೆ;- ಡಾ.ಪಿ.ಎಸ್ ಗಣಪಯ್ಯ.( 1950)
ಬರುವನಪ್ಪ ಬರುವನು
ನಮ್ಮ ಚೌತಿ ಗಣಪನು
ವರದ ಹಸ್ತವೆತ್ತುತ
ಭರಧಿ ವಿದ್ಯೆ ಕೊಡುವನು
ಕಡುಬು ಕಡಲೆ ತಿನ್ನಲು
ಇಲಿಯನೇರಿ ಬರುವನು
ಒಡನೆ ದೊಡ್ಡ ಹೊಟ್ಟೆಯ
ತೋರಿ ತೋರಿ ನಡೆವನು
ಮುರಿದು ಹೋದ ದವಡೆಯ
ಕರದಿ ಹಿಡಿದು ಬರುವನು
ಉದರವನ್ನು ಹಾವಿನಿಂದ
ಸುತ್ತಿ ಗಣಪ ಬರುವನು
ಮುರಿದು ಮುರಿದು ಚಕ್ಕುಲಿ
ನಿನ್ನ ಬಾಯ್ಗೆ ಇಡುವೆನು
ಹುರಿದ ಕಡಲೆ ಕಾಳನು
ಇಲಿಗೆ ತಿನಲು ಕೊಡುವೆನು
ತುಪ್ಪ ಬೆರೆಸಿದನ್ನವ
ಅಪ್ಪ ನಿನಗೆ ಕೊಡುವನು
ಉದ್ದಮೊರೆಯಣ್ಣನೇ
ಬೇಗ ಬೇಗ ಕರೆವೆನು
ದೇವ ನಿನಗೆ ಮಣಿವೆನು
ವರವ ವಿದ್ಯೆಯ ಕಲಿಯಲು
ಎಡರುಗಳ ತಪ್ಪಿಸಿ
ಭರಧಿ ವಿದ್ಯೆ ಪಾಲಿಸು
ಈ ಕವನ ಮಕ್ಕಳ ನೆಚ್ಚಿನ ಗೀತೆಯಾಗಿದೆ. ಗಣಪನೆಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಹತ್ತಿರದವನೇ .ಅಂದು ರಚಿಸಿದ ಗೀತೆ ಇಂದಿಗೂ ಪ್ರಸ್ತುತವೇ ಏಕೆಂದರೆ ಗಜಾನನ ಯಾವತ್ತಿಗೂ ನವನವೀನನೇ. ಆತನೆಂದರೆ ಮನಸಿಗೂ , ಕನಸಿಗೂ , ವಾಸ್ತವಕ್ಕೂ ಬಹಳ ಹತ್ತಿರದವನು. ಭಗವಂತನೇ ಆದರೂ ಗೆಳೆಯನಂತೆ. ಏನೇ ಇದ್ದರೂ ಗಣೇಶನೊಂದಿಗೆ ಹಂಚಿಕೊಂಡರೇ ಸಮಾಧಾನ. ನಮ್ಮ ಯಾವುದೇ ಕೆಲಸಗಳಿ ಕಾರ್ಯಗಳಿದ್ದರೂ ಆರಂಭವಾಗುವುದು ವಿಘ್ನೇಶ್ವರನ ಧ್ಯಾನದೊಂದಿಗೆ. ನಮ್ಮ ಸಂಪೂರ್ಣ ಶರಣಾಗತಿಯೊಂದೇ ಗಜವದನನನ್ನು ಒಲಿಸಿಕೊಳ್ಳಲಿರುವ ಮಾರ್ಗವಾಗಿದೆ. ಪ್ರೀತಿಯಿಂದ ಅರ್ಪಿಸುವ ಗರಿಕೆಯೂ ಆತನಿಗೆ ಇಷ್ಟವೇ. ಖಾದ್ಯ ಪ್ರಿಯನಾದ ಗಣಪನಿಗೆ ಚೌತಿಯಂದು ಎಷ್ಟು ನೈವೇದ್ಯವನ್ನು ತಯಾರಿಸಿದರೂ ಇನ್ನೂ ಮಾಡಬಹುದಿತ್ತೇನೋ ಎಂದೇ ಮನಸಿಗಾಗುವುದು. ಪಂಚಕಜ್ಜಾಯ, ಪಾಯಸ, ಅಪ್ಪಕಜ್ಜಾಯ, ಚಕ್ಕುಲಿ, ಕೋಡು ಬಳೆ , ಕರ್ಜಿಕ್ಕಾಯಿ, ಮೋದಕ , ಅವಲಕ್ಕಿ ರಸಾಯನ ಹಾಗೂ ಇತರತಿಂಡಿಗಳು, ಹಣ್ಣುಗಳು. ಹೀಗೆ ನಮಗೇನು ಸಾಧ್ಯವೋ ಅದನ್ನೇ ಪೂರ್ಣ ಮನಸಿನಿಂದ ಅರ್ಪಿಸಿದರಾಯಿತು. ಮಾಡುವ ಕೆಲಸಗಳು ಫಲಪ್ರದವಾಗಲುು ಆರಂಂಭದಲ್ಲಿ ಗಣೇಶ ಸ್ತುತಿ, ಗಣಪತಿ ಹವನ ಮಾಡುವುದು ರೂಡಿ. ಯಾವತ್ತೂ ಗೌಜಿ ಗದ್ಧಲಗಳಿಗೆೆ ಪ್ರಸಿದ್ಧವಾದ ಚೌತಿ ಗೆ ಕೊರೊನಾ ಬೇಲಿ ಹಾಕಿದೆ. ವಾರ ಹತ್ತು ದಿನಗಳ ಕಾಲ ಸಭೆ ಸಮಾರಂಭ , ನೃತ್ಯ, ಸಂಗೀತ, ಸಂತರ್ಪಣೆಯೆಂದು ಮೈ ಮರೆಯುತ್ತಿದ್ದ ಜನತೆೆ ಈ ಬಾರಿಿ ಪೂಜಾ ಕಾರ್ಯ ಗಳಿಗಷ್ಟೇ ಸೀಮಿತ ವಾಗ ಬೇಕಾಗಿದೆ. ನಮಗಿರುವ ಮಿತಿಯಲ್ಲಿ ಸುಂದರವಾಗಿ , ಸುರಕ್ಷಿತವಾಗಿ ಗಣೇಶೋತ್ಸವ ಆಚರಿಸೋಣ. ಜೈ ಗಣೇಶ.
– ಅಶ್ವಿನಿ ಮೂರ್ತಿ ಅಯ್ಯನಕಟ್ಟೆ