ಗುತ್ತಿಗಾರು: ಗುತ್ತಿಗಾರು ಪ್ರದೇಶದಲ್ಲಿ ಡೆಂಘೆ ವಿಪರೀತವಾಗಿ ಕಂಡುಬಂದಿತ್ತು. ಈಗಲೂ ಹಲವು ಕಡೆ ಡೆಂಘೆ ಪ್ರಕರಣಗಳು ಇವೆ. ಈ ಹಿಂದೆಯೂ ಡೆಂಘೆ, ಮಲೇರಿಯಾ ಇಲ್ಲಿ ಕಂಡುಬಂದಿತ್ತು. ಈ ಹಿಂದೆ ಆರೋಗ್ಯ ಸಚಿವರೇ ಗುತ್ತಿಗಾರಿಗೆ ಭೇಟಿ ನೀಡಿದ್ದರು. ಇದೀಗ ಆರೋಗ್ಯ ಸಮಸ್ಯೆಗೆ ಸ್ವಚ್ಛತೆಯ ಕೊರತೆಯೂ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇದಕ್ಕೆ ಇನ್ನೊಂದು ಪ್ರಮುಖ ಕಾರಣ, ಸ್ವಚ್ಛತೆಯ ಕೊರತೆ. ಗುತ್ತಿಗಾರಿನ ವಿವಿದೆಡೆ ಸ್ವಚ್ಛತೆಯ ಕೊರತೆ ಕಾಣುತ್ತದೆ. ಸ್ವಚ್ಛತಾ ಆಂದೋಲನ ನಡೆದರೆ ನಂತರ ಮತ್ತೆ ಅಷ್ಟೇ ಪ್ರಮಾಣದ ಕಸ, ತ್ಯಾಜ್ಯ ಕಾಣುತ್ತದೆ. ಇನ್ನು ಚರಂಡಿಗಳು ವ್ಯವಸ್ಥಿತ ರೀತಿಯಲ್ಲಿ ಇಲ್ಲ. ಈಗ ಮಳೆ ಶುರುವಾಗುತ್ತಿದ್ದಂತೆಯೇ ಗುತ್ತಿಗಾರು ಪೇಟೆಯ ನೀರು ಚರಂಡಿ ಮೂಲಕ ಹರಿದು ಬಳ್ಳಕ್ಕ ಕಡೆಗೆ ತಿರುವ ಪ್ರದೇಶದ ಮೋರಿಯಲ್ಲಿ ಇಡೀ ತ್ಯಾಜ್ಯ ಸಿಲುಕಿಕೊಂಡು ನೀರು ಬ್ಲಾಕ್ ಆಗಿ ತ್ಯಾಜ್ಯಗಳೆಲ್ಲಾ ಅಲ್ಲಲ್ಲೇ ನಿಂತು ಸೊಳ್ಳೆ ಉತ್ಪಾದನಾ ತಾಣವಾಗುತ್ತಿದೆ. ಹೀಗಾಗಿ ಡೆಂಘೆ ಹರಡುವುದಕ್ಕೆ ಇದೂ ಕಾರಣವಾಗುತ್ತದೆ. ಈ ಬಗ್ಗೆ ಹಲವು ಬಾರಿ ಪಂಚಾಯತ್ ಗೆ , ಆರೋಗ್ಯ ಇಲಾಖೆಗೆ ಸಾರ್ವಜನಿಕರು ಮೌಖಿಕವಗಿ ತಿಳಿಸಿದ್ದಾರೆ. ಹೀಗಾದರೂ ಸ್ವಚ್ಛತೆಗೆ, ಮುಂಜಾಗ್ರತೆಗೆ ಕ್ರಮವಾಗಿಲ್ಲ ಎಂದು ದೂರಿದ್ದಾರೆ. ತಕ್ಷಣವೇ ಇಲ್ಲಿ ಕ್ರಮ ಆಗದೇ ಇದ್ದರೆ ತ್ಯಾಜ್ಯ ಸಹಿತ ಕೊಳಚೆ ನೀರು ಅಲ್ಲಲ್ಲಿ ಶೇಖರಣೆಯಾಗಿ ರೋಗ ಹೆಚ್ಚಾಗುವ ಭೀತಿ ಇದೆ. ಈ ಬಗ್ಗೆ ಸಂಬಂಧಿತರು ಗಮನಹರಿಸಬೇಕಿದೆ. ಆರೋಗ್ಯದ ಕಡೆಗೆ ಗಮನಹರಿಸಬೇಕಿದೆ.