ಸುಳ್ಯ ತಾಲೂಕಿನಲ್ಲಿ ಗ್ರಾಮ ವಿಕಾಸ ಸಮಿತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಶ್ರಯದಲ್ಲಿ ಈ ಬಾರಿ ತರಕಾರಿ ಬೀಜಗಳ ವಿತರಣೆ ನಡೆಯಲಿದೆ.ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆದಿದ್ದು ತರಕಾರಿ ಬೀಜಗಳ ಸಂಗ್ರಹ ನಡೆದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆಸಕ್ತ ಕೃಷಿಕರು ತರಕಾರಿ ಬೀಜವನ್ನು ಬಿತ್ತುವಂತೆ ಹಾಗೂ ತರಕಾರಿ ಬೆಳೆಯನ್ನು ಬೆಳೆಯುವಂತೆ ಉತ್ತೇಜನ ನೀಡಲಾಗಿದೆ. ಆತ್ಮನಿರ್ಭರ ಭಾರತ ಹೆಜ್ಜೆಯಾಗಿರುವ ಈ ಯೋಜನೆಯಲ್ಲಿ ಆಸಕ್ತ ಕೃಷಿಕರು ತೊಡಗಿಸಿಕೊಳ್ಳಬಹುದಾಗಿದೆ. ಮುಖ್ಯವಾಗಿ ಅಲಸಂಡೆ, ಪಡುವಲಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಸೋರೆಕಾಯಿ, ಬದನೆ, ಚೀನೀಕಾಯಿ ಸೇರಿದಂತೆ ವಿವಿಧ ತರಕಾರಿ ಬೀಜಗಳು ಲಭ್ಯವಾಗಲಿದೆ. ಗುಣಮಟ್ಟದ ತರಕಾರಿ ಬೀಜಗಳನ್ನೇ ಆಯ್ಕೆ ಮಾಡಲಾಗಿದ್ದು ಜೂ.8 ರ ಬಳಿಕ ವಿವಿಧ ಸಹಕಾರಿ ಸಂಘ ಹಾಗೂ ಗ್ರಾಮ ವಿಕಾಸ ಸಮಿತಿಗಳ ಆಶ್ರಯದಲ್ಲಿ ಕೃಷಿಕರಿಗೆ ವಿತರಣೆಯಾಗಲಿದೆ. ಈಗಿನ ಅಂದಾಜು ಪ್ರಕಾರ ತಾಲೂಕಿನ ಸುಮಾರು 6000 ಕುಟುಂಬಗಳಿಗೆ ತರಕಾರಿ ಬೀಜ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸಹಕಾರಿ ಸಂಘಗಳೂ ಸಹಕಾರ ನೀಡಲಿದೆ.
ಜೂ.8 ರಂದು ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಗ್ರಾಮ ವಿಕಾಸ ಸಮಿತಿ ಸುಳ್ಯ ಮತ್ತು ಅಜ್ಜಾವರ ಆಶ್ರಯದಲ್ಲಿ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಸುಳ್ಯ ಸಿಎ ಬ್ಯಾಂಕ್ ವಠಾರದಲ್ಲಿ ನಡೆಯಲಿದೆ. ಶಾಸಕ ಅಂಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ತಾಲೂಕಿನಲ್ಲಿ ಪ್ರತೀ ಗ್ರಾಮ ಮಟ್ಟದಲ್ಲೂ ಆಯಾ ಗ್ರಾಮದ ಸಹಕಾರಿ ಸಂಘ ಮತ್ತು ಗ್ರಾಮ ವಿಕಾಸ ಸಮಿತಿಯ ವತಿಯಿಂದ ತರಕಾರಿ ಬೀಜ ವಿತರಣೆ ನಡೆಯುವುದು.
ತರಕಾರಿ ಬೆಳೆಯು ಕೃಷಿಕರಿಗೆ ಸ್ವಾವಲಂಬನೆಯ ದಾರಿಯನ್ನು ಹೇಳುವುದಲ್ಲದೆ ಉತ್ತಮ ಆದಾಯವನ್ನೂ ತರಬಲ್ಲುದು. ಆತ್ಮನಿರ್ಭರ ಭಾರತದ ಉದ್ದೇಶಕ್ಕೂ ಪೂರಕವಾಗಲಿದೆ. ಕೃಷಿಕರು ತರಕಾರಿ ಬೆಳೆದು ತಾವು ಉಪಯೋಗಿಸಿ ಹೆಚ್ಚಾಗಿರುವ ತರಕಾರಿಯನ್ನು ಮಾರಾಟ ಮಾಡಲು ಕೂಡಾ ಅವಕಾಶವೂ ಸಿಗಲಿದೆ.