ಭಾಗಮಂಡಲ: ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರದಲ್ಲಿ ಅ.18 ರಂದು ಪವಿತ್ರ ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಗ್ರೀನ್ ಸಿಟಿ ಫೋರಂ ಸಂಘಟನೆ ನೇತೃತ್ವದಲ್ಲಿ ತಲಕಾವೇರಿಯಿಂದ ಭಾಗಮಂಡಲದವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ವಿದ್ಯಾರ್ಥಿಗಳು, ಕ್ಲೀನ್ ಕೂರ್ಗ್ ಇನ್ಸೆಟಿವ್ (ಸಿಸಿಐ) ಸಂಘಟನೆ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ತಲಕಾವೇರಿ ಕ್ಷೇತ್ರದ ಪ್ರವೇಶದ್ವಾರದಿಂದ ಸ್ವಚ್ಛತೆ ಪ್ರಾರಂಭಿಸಲಾಯಿತು. ರಸ್ತೆ ಎರಡು ಬದಿಯಲ್ಲಿದ್ದ ಬಾಟಲಿ, ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕುವುದರ ಮೂಲಕ ಸ್ವಚ್ಛಗೊಳಿಸಲಾಯಿತು. ಈ ವೇಳೆ ವಾಹನಗಳಲ್ಲಿ ಆಗಮಿಸಿದ ಪ್ರವಾಸಿಗರಿಗೆ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಲಾಯಿತು. ದಕ್ಷಿಣ ಭಾರತದ ಜೀವನದಿ ಕಾವೇರಿ ಕ್ಷೇತ್ರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂಬ ಸಂದೇಶ ರವಾನಿಸಲಾಯಿತು.
ನಾಲ್ಕು ವರ್ಷದಿಂದ ಕಾವೇರಿ ತೀರ್ಥೋದ್ಭವಕ್ಕೆ ಮುನ್ನ ತಲಕಾವೇರಿಯಿಂದ ಭಾಗಮಂಡಲದವರೆಗೂ ಸ್ವಚ್ಛತೆ ಮಾಡಲಾಗುತ್ತಿದೆ. ನಮ್ಮ ನಡೆ ಸ್ವಚ್ಛತೆ ಕಡೆ ಎಂಬ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಸ್ವಚ್ಛತೆ ಮಾಡಲಾಗುತ್ತಿದೆ ಎಂದು ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಹೇಳಿದರು. ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಪವಿತ್ರ ಕ್ಷೇತ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿಯೊಬ್ಬರು ಮುತುವರ್ಜಿ ವಹಿಸಬೇಕೆಂದು ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಹೇಳಿದರು.
ಪ್ರತಿಯೊಬ್ಬರ ಸಹಕಾರದಿಂದ ಸ್ವಚ್ಛತೆ ಕಾಪಾಡಲು ಸಾಧ್ಯವಾಗಿದೆ. ಹಲವು ವರ್ಷಗಳಿಗೆ ಹೋಲಿಸಿದ್ದಲ್ಲಿ ಈಗ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿದೆ. ಪ್ರತಿಯೊಂದು ಸ್ಥಳದಲ್ಲಿಯೂ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ ಎಂದು ಕ್ಲೀನ್ ಕೂರ್ಗ್ ಇನ್ಸೆಟಿವ್ ಪ್ರಮುಖರಾಡ ಬಡುವಂಡ ಅರುಣ್ ಅಪ್ಪಚ್ಚು ಹೇಳಿದರು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಉತ್ಪಾದನೆ ಮೊದಲು ನಿಲ್ಲಿಸಬೇಕು. ಸ್ನೇಹಿ ವಸ್ತುಗಳನ್ನು ಮಾತ್ರ ಬಳಸುವಂತಾಗಬೇಕು. ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಹರೀಶ್ ಹೇಳಿದರು.
ಸ್ವಚ್ಛತೆಯಲ್ಲಿ ಗ್ರೀನ್ ಸಿಟಿ ಫೋರಂ ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ನಿರ್ದೇಶಕರಾದ ಮೋಂತಿ ಗಣೇಶ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಶಿಕ್ಷಕರಾದ ಸುನಿತಾ, ತನುಜಾ, ಕ್ಲೀನ್ ಕೂರ್ಗ್ ಇನ್ಸೆಟಿವ್ ಪ್ರತಿನಿಧಿಗಳಾದ ಪ್ರಶಾಂತ್ ಚಿಣ್ಣಪ್ಪ, ಕರಣ್ ಸುಬ್ಬಯ್ಯ, ಮನೆಯಪಂಡ ಬೋಪಣ್ಣ, ಸುಜಿತ್ ಮುದ್ದಪ್ಪ ಪಾಲ್ಗೊಂಡಿದ್ದರು.
(