ಶ್ರೀಹರಿಕೋಟ: ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಇಂದು ಚಂದ್ರಯಾನ-2 ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಬೆಳಗ್ಗೆ ಉಡಾವಣೆಗಿಂತ 56 ನಿಮಿಷ ಮೊದಲು ಟ್ವೀಟ್ ಮಾಡಿರುವ ಇಸ್ರೋ ಸದ್ಯದಲ್ಲೇ ಉಡಾವಣೆಯ ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಹೆಮ್ಮೆಯ ಜಿಎಸ್‌ಎಲ್‌ವಿ ಮಾಕ್-3 ಬಾಹುಬಲಿ ಉಡಾವಣಾ ವಾಹನದಲ್ಲಿ ಗಗನನೌಕೆ ಸಾಗಬೇಕಾಗಿತ್ತು. ಚಂದ್ರಯಾನದಲ್ಲಿ ರೋವರ್ ಚಲನೆಗೆ ನೆರವಾಗಲು ಕಾನ್ಪುರ ಐಐಟಿ ವಿಜ್ಞಾನಿಗಳು ವಿಶೇಷ ತಂತ್ರಾಂಶ ರೂಪಿಸಿದ್ದಾರೆ. ಚಲನೆಗೆ ನೆರವಾಗಲು ವಿಶೇಷ ಮೋಷನ್ ಪ್ಲ್ಯಾನಿಂಗ್ ಹಾಗೂ ಮ್ಯಾಪಿಂಗ್‌ನ ತಂತ್ರಾಂಶ ಇದಾಗಿದೆ. ಭಾರತದ ಅತಿ ಭಾರದ ರಾಕೆಟ್ ‘ಬಾಹುಬಲಿ’ ಎಂದು ಹೆಸರಿಸಲಾದ ಜಿಎಸ್‌ಎಲ್‌ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ. ಇದರಲ್ಲಿ ನಾಸಾದ ಒಂದು ಉಪಕರಣವೂ ಇದೆ. ಈ ಹಿಂದೆ ಚಂದ್ರಯಾನ-1 ಮತ್ತು ಮಂಗಳಯಾನದ ಉಪಗ್ರಹ ವನ್ನು ಪಿಎಸ್ಎಲ್ವಿ ಕ್ಲಾಸ್ನ ರಾಕೆಟ್ನಿಂದ ಉಡಾವಣೆ ಮಾಡಲಾಗಿತ್ತು. ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದೆ. ಚಂದ್ರಯಾನ-2, ಚಂದ್ರ ಉಪಗ್ರಹದಲ್ಲಿ ಭಾರತದ ಎರಡನೆಯ ಅಧ್ಯಯನವಾಗಲಿದೆ.
ಉಡಾವಣೆಗೆ ಮುನ್ನ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆ ಸ್ಥಗಿತ ಮಾಡಲಾಗಿದ್ದು ಮುಂದೆ ಈ ಸದ್ಯದಲ್ಲಿ ಉಡಾವಣೆಗೊಳ್ಳಲಿದೆ.