ಮಂಗಳೂರು\ಸುಳ್ಯ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರೆ 73 ರ ಚಾರ್ಮಾಡಿ ಘಾಟಿಯಲ್ಲಿ ಒಂದು ತಿಂಗಳ ಕಾಲ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಭಾರೀ ಮಳೆಯಲ್ಲಿ ಗುಡ್ಡ ಕುಸಿದು, ರಸ್ತೆ ಕೊಚ್ಚಿ ಹೋಗಿ ಹೆದ್ದಾರಿಗೆ ತೀವ್ರ ಹಾನಿ ಸಂಭವಿಸಿರುವ ಹಿನ್ನಲೆಯಲ್ಲಿ ದುರಸ್ಥಿಗಾಗಿ ಆ.15 ರಿಂದ ಸೆ.14 ರವರೆಗೆ 30 ದಿನಗಳ ಕಾಲ ಹೆದ್ದಾರಿಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿ ದ.ಕ.ಜಿಲ್ಲಾಧಿಕಾರಿ ಎಸ್.ಶಶಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ, ಮರ, ಕಲ್ಲುಗಳು ಬಿದ್ದಿರುವುದರಿಂದ ಕಳೆದ ಒಂದು ವಾರದಿಂದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಕಳೆದ ಕೆಲವು ದಿನಗಳಲ್ಲಿ ಘಾಟಿಯಲ್ಲಿ ಅಲ್ಲಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿತ ಉಂಟಾಗಿದೆ, ಬೃಹತ್ ಗಾತ್ರದ ಕಲ್ಲು, ಮರಗಳು ಹೆದ್ದಾರಿಯಲ್ಲಿ ಬಿದ್ದಿದೆ.ಅಲ್ಲದೆ ಅಲ್ಲಲ್ಲಿ ಹೆದ್ದಾರಿ ಕೊಚ್ಚಿ ಹೋಗಿ, ಬದಿ ಕುಸಿದು ಹೋಗಿ ಪ್ರಪಾತ ಸೃಷ್ಠಿಯಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್ ಗಳ ಕೋರಿಕೆಯ ಮೆರೆಗೆ ರಸ್ತೆಯ ದುರಸ್ಥಿಗಾಗಿ ಒಂದು ತಿಂಗಳ ಕಾಲ ರಸ್ತೆಯಲ್ಲಿ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.