ಸುಳ್ಯ: ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ಮದ ಏರಿದ ಆನೆ ಪೇಟೆಯಲ್ಲಿ ಓಡಾಡಿ ಹಾನಿ ಮಾಡಿತ್ತು. ಅದೇ ಸಂದರ್ಭ ಪ್ರಶ್ನೆಯೊಂದು ಬಂತು… ಪುತ್ತೂರು, ಸುಳ್ಯ, ಮಂಗಳೂರು ನಗರಕ್ಕೆ ಆನೆ ಬಂದರೆ ತಕ್ಷಣದ ಪರಿಹಾರ ಏನು ? ಈ ಬಗ್ಗೆ ಅರಣ್ಯ ಇಲಾಖೆ ಸಹಿತ ವಿವಿಧ ಇಲಾಖೆಗಳ ಬಳಿ ಮಾತನಾಡಿಸಲಾಯಿತು. ತಕ್ಷಣದ ಪರಿಹಾರ ಏನೂ ಇರಲಿಲ್ಲ…!
ಬಳಿಕ ಈ ಸಂಗತಿ ಮರೆತೇ ಹೋಗಿತ್ತು. ಅದಾಗಿ ಕೆಲವೇ ಸಮಯದಲ್ಲಿ ಪುತ್ತೂರು ನಗರದಲ್ಲಿ ಲಾರಿಯಲ್ಲಿ ಆನೆ ಸಾಗಾಟ ಮಾಡುತ್ತಿದ್ದಾಗ ಮದ ಏರಿದ ಆನೆ ಲಾರಿ ಚಾಲಕ ಹಾಗೂ ಮಾವುತ ಮೇಲೆ ಸಿಟ್ಟಾಯಿತು. ಎರಡು ದಿನಗಳ ಕಾಲ ಪುತ್ತೂರು ನಗರದಲ್ಲೇ ಆನೆ ಉಳಿಯಿತು. ವಾಹನ ಓಡಾಟಗಳಿಗೂ ಅಡ್ಡಿಯಾಯಿತು. ಆಗ ಇಲಾಖೆಗಳಿಗೂ ಮನವರಿಕೆಯಾಗಿತ್ತು.
ಈಗಲೂ ಅದೇ ಪ್ರಶ್ನೆ… ಸುಳ್ಯದ ಗ್ರಾಮೀಣ ಭಾಗ ಸೇರಿದಂತೆ ಪೇಟೆಗೆ ಚಿರತೆ ದಾಳಿ ಮಾಡಿದರೆ ತಕ್ಷಣದ ಕ್ರಮ ಏನು ? ಪರಿಹಾರ ಹೇಗೆ ?
ಇದಕ್ಕೆ ಉತ್ತರ ಗುರುವಾರ ಬಳ್ಪದಲ್ಲಿ ನಡೆದ ಚಿರತೆ ದಾಳಿ. ಯಾವುದೇ ಉರುಳಿಗೆ ಬಿದ್ದ ಚಿರತೆ ಯದ್ವಾತದ್ವ ಓಡಾಡಿತು, ದಾಳಿ ಮಾಡಿತು. ಸ್ಥಳೀಯರ ಮೇಲೆ ಮಾತ್ರವಲ್ಲ ಅರಣ್ಯ ಇಲಾಖೆಯ ಅಧಿಕಾರಿ, ಸಿಬಂದಿಗಳ ಮೇಲೂ ದಾಳಿ ಮಾಡಿತು. ಆಗ ಮತ್ತಷ್ಟು ಅರಿವಾಯ್ತು, ಇಲಾಖೆಯ ಬಳಿ ಚಿರತೆ ಹಿಡಿಯುವ ಬಲೆ, ಜಿಲ್ಲೆಯಲ್ಲಿ ಚಿರತೆ ಹಿಡಿಯುವ ಕೌಶಲ್ಯ ಹೊಂದಿದ ಸಿಬಂದಿಗಳ ಕೊರತೆ, ಡ್ರೋನ್ ಕ್ಯಾಮರಾ ಸೇರಿದಂತೆ ಯಾವುದೇ ವ್ಯವಸ್ಥಿತ ಸಲಕರಣೆಗಳು ಇಲ್ಲ..!. ಈ ಹಿಂದೆ ಬೆಳ್ತಂಗಡಿ ತಾಲೂಕು ಸೇರಿದಂತೆ ವಿವಿದೆಡೆ ಚಿರತೆ ಪ್ರತ್ಯಕ್ಷವಾಗಿದೆ. ಬಳ್ಪ ಪರಿಸರದಲ್ಲೇ ಹಲವು ಬಾರಿ ಕಾಣಿಸಿಕೊಂಡಿದೆ. ಹಾಗಿದ್ದರೂ ಯಾವುದೇ ವ್ಯವಸ್ಥಿತ ಸಲಕರಣೆಗಳು, ಕೌಶಲ್ಯ ಭರಿತ ಸಿಬಂದಿಗಳು ಇಲ್ಲದೇ ಇರುವುದು ಕಂಡುಬಂದಿದೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ಬಗ್ಗೆ ಯೋಚನೆ ಮಾಡಬೇಕಿದೆ. ಜನರನ್ನು ಭಯದಿಂದ ಮುಕ್ತ ಮಾಡಲು ತಕ್ಷಣದ ಪರಿಹಾರ ಹಾಗೂ ಚಿರತೆ ಹಿಡಿಯುವ ಉಪಾಯ, ಓಡಿಸುವ ಗುಟ್ಟು ಇತ್ಯಾದಿಗಳ ಕಡೆಗೆ ಗಮನಹರಿಸಬೇಕಿದೆ. ಬಳ್ಪದಲ್ಲಿ ಹಲವು ಬಾರಿ ಚಿರತೆ ಪ್ರತ್ಯಕ್ಷವಾಗಿದೆ. ಈಗ ಪೇಟೆ ಸಮೀಪವೇ ಚಿರತೆ ಕಂಡುಬರುತ್ತಿರುವ ಕಾರಣ ತಕ್ಷಣವೇ ಹಿಡಿಯುವ ಹಾಗೂ ಜನರಿಗೂ ಹೇಗೆ ರಕ್ಷಣೆ ಎಂಬುದರ ಬಗ್ಗೆಯೂ ಮಾಹಿತಿ ಅಗತ್ಯವಾಗಿದೆ.