ಬೆಳ್ಳಾರೆ: ಮಕ್ಕಳ ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಕಾಲ ಗುರುಕುಲ ಪದ್ಧತಿ ಶೈಲಿಯಲ್ಲಿ ಧಾರ್ಮಿಕ ಶಿಕ್ಷಣ, ವೇದಾಭ್ಯಾಸ ಹಾಗು ಮಕ್ಕಳ ಭವಿಷ್ಯಕ್ಕೆ ಪೂರಕವಾಗುವಂತಹ ಕಲೆಗಾರಿಕೆಯನ್ನು ಬೆಳ್ಳಾರೆ ಬಳಿಯ ಚೂಂತಾರಿನಲ್ಲಿ ವೇದನಿಲಯದಲ್ಲಿ ಸದ್ದಿಲ್ಲದೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ.
ಬೆಳ್ಳಾರೆ ಸಮೀಪದ ಅಪರಪಡ್ನೂರು ಗ್ರಾಮ ಚೂಂತಾರು ವೇದನಿಲಯದಲ್ಲಿ
ಚೂಂತಾರಿನ ದಿ| ಕೃಷ್ಣ ಭಟ್ ಪ್ರತಿಷ್ಠಾನದ ಆಶ್ರಯದಲ್ಲಿ ಕಾರ್ಯದರ್ಶಿ ವೇ|ಮೂ ಶಿವಪ್ರಸಾದ್ ಭಟ್ ಚೂಂತಾರು ಮುಂದಾಳತ್ವದಲ್ಲಿ ನಡೆಯುತ್ತಿರುವ ವೇದ, ಯೋಗ ಕಲಾ ಶಿಬಿರಕ್ಕೆ ಈಗ ದಶಮಾನೋತ್ಸವ ಕಳೆದು ಒಂದು ವರ್ಷ. ನಿತ್ಯ ನಿರಂತರ ವೇದದೊಂದಿಗೆ ಆಧ್ಯಾತ್ಮ ಹಾಗು ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿರುವ ಈ ವೇದ ಶಿಬಿರವು ಕಳೆದ 11 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿದೆ. 10 ವರ್ಷಗಳ ಹಿಂದಿನ ಬೇಸಿಗೆ ರಜೆಯಲ್ಲಿ 10 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಗಿದ್ದ ಶಿಬಿರವಿಂದು ಅನೇಕ ಮಕ್ಕಳಿಗೆ ಶಿಕ್ಷಣ ನೀಡಿದೆ.
ಇಲ್ಲಿ ಮಕ್ಕಳಿಗೆ ಕೇವಲ ವೇದಾಧ್ಯನಕ್ಕೆ ಸೀಮಿತವಾಗಿರಿಸದೆ ಇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಪ್ರತಿಷ್ಠಾನವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಕ್ಕಳಿಗೆ ನಿತ್ಯ ಪಂಚಾಂಗವನ್ನು ಅಧ್ಯಯಿಸಲು ತರಬೇತಿ ನೀಡುತ್ತದೆ. ಭಜನೆ ತರಬೇತಿ, ಮಕ್ಕಳಿಗೆ ಎಳವೆಯಲ್ಲಿಯೇ ಸಭಾಕಂಪನವನ್ನು ಹೋಗಲಾಡಿಸುವ ಸಲುವಾಗಿ ಭಾಷಣ ಕಲೆಯನ್ನು, ಸಾಂಸ್ಕಂತಿಕವಾಗಿ ತರಬೇತಿಗಳನ್ನು ಪ್ರತಿಷ್ಠಾನ ನೀಡುತ್ತಿದೆ. ಬಿಡುವಿನ ವೇಳೆಯಲ್ಲಿ ನುರಿತ ಯೋಗ ಪಂಡಿತರಿಂದ ಯೋಗ, ಮುದ್ರೆಗಳು, ವರ್ಣಚಿಕಿತ್ಸೆ ಕಲೆಗಾರಿಕೆಯನ್ನು ಕಲಿಸಿಕೊಡಲಾಗುತ್ತಿದೆ. ಶಿಬಿರದಲ್ಲಿ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನೂ ಏರ್ಪಡಿಸಿ, ಶಿಬಿರಾರ್ಥಿಗಳನ್ನು ಇನ್ನಷ್ಟೂ ಕಲಿಕೆಯಡೆಗೆ ಉತ್ಸಾಹಿಗಳಾಗುವಂತೆ ಮಾಡುತ್ತಿರುತ್ತದೆ.
ಶಿಬಿರಕ್ಕೆ ಪ್ರತೀ ವರ್ಷ ಊರಿನ ಸಮಸ್ತರು ತರಕಾರಿಗಳನ್ನು, ಸಿಹಿ ತಿಂಡಿಗಳನ್ನು , ಅಡುಗೆ ಸಾಮಾಗ್ರಿಗಳನ್ನು ದಾನವಾಗಿ ನೀಡುತ್ತಿದ್ದಾರೆ.
“ಸುಳ್ಯಸುದ್ದಿ.ಕಾಂ” ಜೊತೆ ಮಾತನಾಡಿದ ಪ್ರತಿಷ್ಠಾನದ ಪ್ರಧಾನ ಅಧ್ಯಾಪಕ ಹಾಗೂ ಕಾರ್ಯದರ್ಶಿ ವೇ| ಮೂ ಶಿವಪ್ರಸಾದ ಭಟ್,” ಮುಂದಿನ ಪೀಳಿಗೆ ದೇಶದ ಹಾಗು ದಾರ್ಮಿಕ ಸಂಸ್ಕಂತಿಯನ್ನು ಮರೆಯಬಾರದು.ವೇದವು ಮನುಷ್ಯರ ಹೃದಯ ಶುದ್ಧಗೊಳಿಸುತ್ತದೆ. ವೇದವೇ ತಮ್ಮ ಅಸ್ಥಿತ್ವಕ್ಕೆ ಸೂತ್ರ ಎಂಬುದನ್ನು ಅರಿತುಕೊಳ್ಳಲು ವೇದ ಶಿಬಿರವು ಮಕ್ಕಳಿಗೆ ತೀರಾ ಅಗತ್ಯ” ಎನ್ನುತ್ತಾರೆ.
ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ “ಸುಳ್ಯಸುದ್ದಿ.ಕಾಂ” ಜೊತೆ ಮಾತನಾಡುತ್ತಾ, “ವೇದ ಶಿಬಿರವು ಭಾರತದ ಭಾವಿ ಸತ್ಪ್ರಜೆಗಳನ್ನು ರೂಪಿಸುತ್ತದೆ.ನಮ್ಮ ನಮ್ಮ ಸಮಾಜದ ಭದ್ರತೆಗೆ ವೇದವೂ ಉತ್ತಮವಾದ ಅಡಿಪಾಯವನ್ನು ನಿರ್ಮಿಸುತ್ತದೆ.” ಎನ್ನುತ್ತಾರೆ.