ಸುಳ್ಯ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯ ಹೆಸರಲ್ಲಿ ದೇಶದಲ್ಲಿ ಗೊಂದಲವನ್ನು ಸೃಷ್ಠಿಸಿ ಜನರನ್ನು ಬೀದಿಗೆ ಬಂದು ನಿಲ್ಲುವ ಸ್ಥಿತಿಯನ್ನು ನಮ್ಮನ್ನು ಆಳುವ ಸರ್ಕಾರವೇ ಸೃಷ್ಠಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿಕೇತ್‍ರಾಜ್ ಮೌರ್ಯ ಹೇಳಿದ್ದಾರೆ.
ಸುಳ್ಯ ತಾಲೂಕು ಮುಸ್ಲಿಂ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಮಾನ ಮನಸ್ಕರ ಒಗ್ಗೂಡುವಿಕೆಯೊಂದಿಗೆ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಸುಳ್ಯದಲ್ಲಿ ನಡೆದೆ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ನಾವೆಲ್ಲರೂ ಸೇರಿ ಈ ದೇಶವನ್ನು ಕಟ್ಟಿದ್ದೇವೆ. ಆದರೆ ನೀವು ಭಾರತೀಯರಾ ಎಂದು ಸರ್ಕಾರವೇ ಕೇಳುವಾಗ ಅದರ ವಿರುದ್ಧ ಪ್ರತಿಭಟಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ನಾವು ಕಟ್ಟಿದ ದೇಶವನ್ನು, ನಮ್ಮ ಸಂವಿಧಾನವನ್ನು ಉಳಿಸುವುದಕ್ಕಾಗಿ ಎಲ್ಲರೂ ನಾಯಕರಾಗಿರುವ ಜನ ಸಾಮಾನ್ಯರ ಹೋರಾಟ ಇದು ಎಂದು ಅವರು ಬಣ್ಣಿಸಿದರು.
ಸಾಮಾಜಿಕ ಕಾರ್ಯಕರ್ತ ಭಾಸ್ಕರ ಪ್ರಸಾದ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಉಳಿಸುವುಕ್ಕೆ ಮತ್ತು ನಮ್ಮ ಸ್ವಾಭಿಮಾನವನ್ನು ಉಳಿಸುವುದಕ್ಕಾಗಿ ನಡೆಯುವ ಹೋರಾಟ ಇದು ಎಂದರು. ಸಮಾವೇಶವನ್ನು ಉದ್ಘಾಟಿಸಿದ ಸಮಸ್ತ ಕೇರಳ ಮುಶಾವರ ಸದಸ್ಯರಾದ ಝೈನುಲ್ ಅಬಿದಿನ್ ತಙಳ್ ದುಗ್ಗಲಡ್ಕ ಮಾತನಾಡಿ ಧರ್ಮದ ಆಧಾರದಲ್ಲಿ ಪೌರತ್ವ ನಿರ್ಧರಿಸಲು ಹೊರಟಿರುವುದು ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಇಡೀ ದೇಶವೇ ವಿರೋಧಿಸುತ್ತಿದೆ ಎಂದರು. ಮುಸ್ಲಿಂ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಇಸಾಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಗಾಂಧಿನಗರ ಜುಮ್ಮಾ ಮಸೀದಿಯ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ, ಬೆಳ್ಳಾರೆ ಜುಮ್ಮಾ ಮಸೀದಿಯ ಖತೀಬರಾದ ಯನೂಸ್ ಸಖಾಫಿ, ಸೂಫಿಯಾನ್ ಸಖಾಫಿ, ಹನೀಫ್ ಹುದವಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ, ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಕಾರ್ಮಿಕ ಮುಖಂಡ ಕೆ.ಪಿ.ಜಾನಿ ಕಲ್ಲುಗುಂಡಿ, ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಸಂಚಾಲಕ ಅಶೋಕ್ ಎಡಮಲೆ, ಸಿಪಿಐಎಂ ಕಾರ್ಯದರ್ಶಿ ಕೆ.ಪಿ.ರಾಬರ್ಟ್ ಡಿಸೋಜ, ಡಾ.ರಘು, ಕೆ.ಕೆ.ಹರಿಪ್ರಸಾದ್, ಆದಂ ಹಾಜಿ ಕಮ್ಮಾಡಿ, ಅಜೀಜ್ ಬುಶ್ರಾ, ಮಹಮ್ಮದ್ ಕುಂಞ ಗೂನಡ್ಕ, ಜಿ.ಕೆ.ಹಮೀದ್, ಅಬ್ದುಲ್ ಗಫೂರ್ ಕಲ್ಮಡ್ಕ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಸ್ಲೀಂ ಹಿತರಕ್ಷಣಾ ವೇದಿಕೆಯ ಸಂಚಾಲಕ ಮಹಮ್ಮದ್ ಇಕ್ಬಾಲ್ ಎಲಿಮಲೆ ಸ್ವಾಗತಿಸಿದರು. ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ.ಮುಸ್ತಫಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಸ್ಲೀಂ ಹಿತರಕ್ಷಣಾ ವೇದಿಕೆಯ ಸಂಚಾಲಕ ಕೆ.ಎಸ್.ಉಮ್ಮರ್ ವಂದಿಸಿದರು.