ಮಂಗಳೂರು : 2019-20ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ಹಾಗೂ ಯುವಜನರಿಗೆ ಜಿಲ್ಲಾ ಯುವ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಮತ್ತು ದಾಖಲೆಗಳನ್ನು ಅಕ್ಟೋಬರ್ 25ರೊಳಗೆ ಸಲ್ಲಿಸಬೇಕು.
ಆಸಕ್ತ ಯುವಕ/ಯುವತಿಯರು 15 ರಿಂದ 35 ವಯೋಮಿತಿಯೊಳಗಿನವರಾಗಿರ ಬೇಕು. ವೈಯಕ್ತಿಕ ಮತ್ತು ಸಾಂಘಿಕ ಪ್ರಸ್ತಾವನೆಯನ್ನು ತಯಾರಿಸುವಾಗ ಎಪ್ರಿಲ್ 1, 2018ರಿಂದ ಮಾರ್ಚ್ 31, 2019 ರವರೆಗೆ ಯುವಕ/ಯುವತಿ ಮಂಡಲ ಹಾಗೂ ಯುವಕ/ಯುವತಿಯರು ಕೈಗೊಂಡಿರುವ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.ಈ ಅವಧಿಯಲ್ಲಿ ಕಾರ್ಯಕ್ರಮ ನಡೆಸಿದ ಅಥವಾ ಸಹಕರಿಸಿದ ಬಗ್ಗೆ ಕಾರ್ಯಕ್ರಮದ ದಿನಾಂಕ, ಭಾವಚಿತ್ರ, ಪತ್ರಿಕಾ ತುಣುಕು, ಆಮಂತ್ರಣ ಪತ್ರಿಕೆ ಇತ್ಯಾದಿಗಳ ಮೂಲ ಪ್ರತಿಗಳನ್ನು ಎ-4 ಅಳತೆಯಲ್ಲಿ ಸಲ್ಲಿಸಬೇಕು. ಸ್ಲೈಡ್ ಹಾಗೂ ವಿಡಿಯೋಗಳ ದಾಖಲೆಗಳನ್ನು ಒದಗಿಸಬೇಕು.
ವೈಯಕ್ತಿಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಯುವಕ/ಯುವತಿಯರು ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕು. ಅರ್ಜಿದಾರರು/ಯುವಸಂಘಗಳು ಇಲಾಖೆಯು ಆಯ್ಕೆ ಮಾಡಿರುವ ಸಮುದಾಯ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿರಬೇಕು.ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ದೂರವಾಣಿ ಸಂಖ್ಯೆ :- 0824-2451264 ನ್ನು ಸಂಪರ್ಕಿಸಬಹುದು ಎಂದು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೆಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು ಇವರನ್ನು ಸಂಪರ್ಕಿಸ ಬಹುದು.