ಸುಳ್ಯ: ತಾಲೂಕಿನಲ್ಲಿ ದಿನಕಳೆದಂತೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ, ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ನರ್ಸ್ ಗಳಿಗೂ ವೈರಸ್ ತಗುಲಿದ ಕಾರಣ ಸರ್ಕಾರಿ ಆಸ್ಫತ್ರೆಯೆ ಸೀಲ್ ಡೌನ್ ಗೆ ಒಳಗಾಗಿದೆ. ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗೂ ಡಯಾಲಿಸಿಸ್ ರೋಗಿಗಳ ಬವಣೆಯನ್ನು ಆಲಿಸುವವರೆ ಇಲ್ಲದಂತಾಗಿದೆ. ಕೊರೋನಾ ನಿಯಂತ್ರಣಕ್ಕೆ ಮತ್ತು ಆಸ್ಪತ್ರೆ ಸೀಲ್ ಡೌನ್ ಆದ ಕಾರಣ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದ್ದ ಕ್ಷೇತ್ರದ ಶಾಸಕರು ಹಾಗು ಸ್ಥಳೀಯಾಡಳಿತಗಳು ಇದಕ್ಕೂ ತಮಗೂ ಸಂಬಂದವೇ ಇಲ್ಲದಂತೆ ವರ್ತಿಸಿ ಮೌನ ವಹಿಸಿರುವುದು ಖಂಡನೀಯವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಕಲಾಂ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಮುಖವಾಗಿ ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸುಳ್ಯದಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ ಅವರು
ಆಸ್ಪತ್ರೆ ಸೀಲ್ ಡೌನ್ ಆಗಿರುವ ಕಾರಣ ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಹಲವು ಮಂದಿ ಸಾರ್ವಜನಿಕರು ಹಾಗು ರೋಗಿಗಳು ಭಯದಿಂದ ಕಾಲ ಕಳೆಯುವ ಪರಿಸ್ಥಿತಿ ಬಂದಿದೆ. ಜನಸಾಮಾನ್ಯರಿಗೆ ಅಭಯ ನೀಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸ್ಥಳೀಯ ಶಾಸಕರು,ನಗರ ಪಂಚಾಯತ್ ಆಡಳಿತ, ತಾಲೂಕು ಪಂಚಾಯತ್ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿರುವುದು ಜನಸಾಮಾನ್ಯರನ್ನು ಇನ್ನಷ್ಟು ಭಯಗೊಳ್ಳುವಂತೆ ಮಾಡಿದೆ. ಆದ್ದರಿಂದ ಇನ್ನಾದರು ಸಂಬಂಧಪಟ್ಟ ಎಲ್ಲಾ ಜನಪ್ರತಿನಿದಿಗಳು ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವ್ರತರಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.