ಸುಳ್ಯ: ಸರಕಾರಿ ಸೇವಾ ಖಾಯಂಮಾತಿಗೆ ಮತ್ತು ತನಗೆ ಬರಬೇಕಾದ ಸಂಬಳವನ್ನು ಕೂಡಲೇ ಪಾವತಿ ಮಾಡಲು ಆರೋಗ್ಯ ಇಲಾಖೆಗೆ ನ್ಯಾಯಲಯಗಳು ಹಲವು ಬಾರಿ ಆದೇಶ ನೀಡಿದರೂ ಆರೋಗ್ಯ ಇಲಾಖೆ ಇಲ್ಲಿಯವರೆಗೆ ಪಾಲಿಸಿಲ್ಲ. 30 ವರ್ಷ ಆದರೂ ಸರಕಾರದಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಈ ಕಾರಣಕ್ಕಾಗಿ ನಾನು ದಯಾಮರಣ ಕೋರಿ ಜಿಲ್ಲಾಧಿಕಾರಿಗಳ ಮೂಲಕ ಸರ್ವೋಚ್ಚ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಸುಳ್ಯ ಆರೋಗ್ಯ ಕೇಂದ್ರದ ಅಡುಗೆ ಸಿಬ್ಬಂದಿ ವೆಂಕಟ್ರಮಣ ಹೇಳಿದರು.
ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ನ್ಯಾಯಾಲಯಗಳ ಆದೇಶಗಳ ಹೊರತಾಗಿಯೂ ತನ್ನ ಸರಕಾರಿ ಸೇವಾ ಖಾಯಂಮಾತಿಗೆ ಕ್ರಮಬದ್ದ ಆದೇಶ ನೀಡದೆ ಸತಾಯಿಸುತ್ತಿರುವ ಹಾಗೂ ತನಗೆ ಬರಬೇಕಾದ ಸಂಬಳ ನೀಡದಿರುವ ಆರೋಗ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು 1988ರಲ್ಲಿ ನಾನು ಸುಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಗೂಲಿ ನೆಲೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿದೆ. ಅಂದಿನಿಂದ ನಿರಂತರವಾಗಿ 1996 ವರೆಗೆ ಕರ್ತವ್ಯ ನಿರ್ವಹಿಸಿದೆ. ಆದರೂ ನನಗೆ ಯವುದೇ ನೋಟಿಸ್ ನೀಡದೇ 1996ರಲ್ಲಿ ನನ್ನನ್ನು ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿದರು. ಇದನ್ನು ಪ್ರಶ್ನಿಸಿ ನಾನು ಕಾರ್ಮಿಕ ನ್ಯಾಯದಲ್ಲಿ ದಾವೆ ಹೂಡಿದೆ. ನ್ಯಾಯಲಯ ನನ್ನ ಪರವಾಗಿ ತೀರ್ಪು ನೀಡಿ 1998ರಲ್ಲಿ ಆದೇಶ ನೀಡಿತ್ತು. ಆದರೂ ಇಲಾಖೆ ನನ್ನನ್ನು ಪುನಃ ನೇಮಕ ಮಾಡದ ಕಾರಣ 1999ರಲ್ಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಹೈಕೋರ್ಟ್ 2 ತಿಂಗಳೊಳಗೆ ಹಿಂದಿನ ಕೆಲಸವನ್ನೇ ಕೊಡಿ ಎಂದು ತೀರ್ಪು ನೀಡಿತ್ತು.
ನಿರಂತರವಾಗಿ 10 ವರ್ಷಕ್ಕೆ ಮಿಕ್ಕಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದರೆ ಸೇವಾ ಖಾಯಾಮಾತಿಗಾಗಿ 2008ರಲ್ಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಇದರ ತೀರ್ಪು 2011ರಲ್ಲಿ ನನ್ನ ಪರವಾಗಿ ಬಂದಿತ್ತು ಆದರೆ ಋಓಗ್ಯ ಇಲಾಖೆ ಉಮಾದೇವಿ ಪ್ರಕರಣವನ್ನು ಉಲ್ಲೇಖಿಸಿ ಉಚ್ಚ ನ್ಯಾಯಲಯದ ತೀರ್ಪನ್ನು ಆರೋಗ್ಯ ಇಲಾಖೆ ತಿರಸ್ಕಾರ ಮಾಡಿತ್ತು. ನನ್ನನ್ನು ಸರಕಾರಿ ಸೇವೆಯಲ್ಲಿ ಅಕ್ರಮಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ 1988 ರಿಂದ 2015 ವರೆಗಿನ ತುಟ್ಟಿಭತ್ಯೆ ಮತ್ತು ಇರತ ಭತ್ಯೆಗಳನ್ನು ವಸೂಲಿ ಮಾಡಿಕೊಡಲು ಮನವಿ ಸಲ್ಲಿಸಿದೆ. ಹಾಸನದ ಕಾರ್ಮಿಕ ಉಪ ಆಯುಕ್ತರು ಮಂಗಳೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಮೊತ್ತವನ್ನು ವಸೂಲಿ ಮಾಡಿಕೊಡುವಂತೆ ಚೆಕ್ ಲಿಸ್ಟ್ ನೀಡಿತ್ತು. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮಧ್ಯೆ 2016ರಲ್ಲಿ ಸರಕಾರದ ಅಧೀನ ಕಾರ್ಯದರ್ಶಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ನೌಕರರ ಸೇವೆಯನ್ನು ಸಕ್ರಮಗೊಳಿಸಿದೆ ಎಂದು ಆದೇಶ ನೀಡಿತ್ತು. ಆದರೂ ನನಗೆ ಖಾಯಂ ವೇತನ ಹಾಗೂ ಇತರ ಭತ್ಯೆಗಳು ನೀಡಲಿಲ್ಲ. ಇದಕ್ಕಾಗಿ ಎರಡು ಬಾರಿ ರಾಜ್ಯಪಾಲರಿಗೆ ಮತ್ತು ಮುಖ್ಯಂತ್ರಿಯವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ನಾನು ಮಾನಸಿವಾಗಿ ಜರ್ಜರಿತನಾಗಿದ್ದೇನೆ. ನನ್ನ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ನ್ಯಾಯಲಯದ ಅಂತಿಮ ಆದೇಶವಾಗಿ 5 ವರ್ಷ ಕಳೆದರೂ ಈ ತನಕ ಸರಕಾರ ನ್ಯಾಯ ಒದಗಿಸಿಲ್ಲ. ಈ ಕಾರಣಕ್ಕಾಗಿ ನಾನು ಸರ್ವೋಚ್ಚ ನ್ಯಾಯಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.