ದಕ್ಷಿಣ ಭಾರತ ಮನೋವೈದ್ಯರ ಸಂಘದ 52 ನೇ ಸಮ್ಮೇಳನದಲ್ಲಿ ವ್ಯಕ್ತವಾದ ಕಳವಳಕಾರಿ ಸಂಗತಿ ಏನು ಗೊತ್ತಾ ?

October 20, 2019
9:00 PM

ಮಡಿಕೇರಿ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಭಾರತ ಮನೋವೈದ್ಯರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಆಯೋಜನೆಗೊಂಡ ದಕ್ಷಿಣ ಭಾರತ ಮನೋವೈದ್ಯರ ಸಂಘದ 52 ನೇ ಸಮ್ಮೇಳನದಲ್ಲಿ ಕುತೂಹಲಕಾರಿ ಅಂಶಗಳು ಪ್ರಸ್ತಾಪಗೊಂಡವು.ಅದರ ಜೊತೆಗೆ ಕಳವಳಕಾರಿ ಮಾಹಿತಿಯೂ ಕೇಳಿಬಂತು. ಈ ಕಳವಳ ದೂರವಾಗಲು ಏನು ಮಾಡಬಹುದು ಎಂಬುದರ ಬಗ್ಗೆ ಯೋಚನೆ ನಡೆಯಬೇಕಿದೆ. ಹಾಗಿದ್ದರೆ ಏನಿದು,  ಈ ವರದಿ ಓದಿ..

Advertisement
Advertisement

 ಭಾರತದಲ್ಲಿ ಯುವಜನಾಂಗ ಮತ್ತು ಮಹಿಳೆಯರ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಸಂಖ್ಯೆ ಮತ್ತಷ್ಟು ಏರಿಕೆಯಾದಲ್ಲಿ ಜಗತ್ತಿನಲ್ಲಿ ಭಾರತ ಅತ್ಯಧಿಕ ಆತ್ಮಹತ್ಯೆಗಳ ದೇಶವಾಗುವ ಅಪಾಯವಿದೆ ಎಂದು ಮುಂಬೈನ ಮಾನಸಿಕ ತಜ್ಞೆ ಡಾ. ಅಲ್ಕಾ ಎ.ಸುಬ್ರಹ್ಮಣ್ಯಂ ಎಚ್ಚರಿಸಿದ್ದಾರೆ.

ಸಮ್ಮೇಳನದಲ್ಲಿ ಯುವಭಾರತೀಯರಲ್ಲಿ ಆತ್ಮಹತ್ಯೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಡಾ.ಅಲ್ಕಾ, ದೇಶದಲ್ಲಿ 15 ರಿಂದ 30 ವರ್ಷದವರೆಗಿನ ಯುವಪೀಳಿಗೆಯಲ್ಲಿ ಆತ್ಮಹತ್ಯೆ ಮನೋಭಾವ ಹೆಚ್ಚಾಗುತ್ತಿದೆ. ಈ ವಯೋಮಾನದವರು ಶೇ.13 ರಷ್ಟು ಪ್ರಮಾಣದಲ್ಲಿ ವಾಹನ ಅಪಘಾತ, ಶೇ.10 ರಷ್ಟು ಮದ್ಯವ್ಯಸನ, ಶೇ.7 ರಷ್ಟು ಮಂದಿ ಇತರ ಕಾರಣಗಳಿಂದ ಸಾವನ್ನಪ್ಪಿದರೆ ಶೇ.18 ರಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಪೈಕಿ ತರುಣಿಯರೂ ಅತ್ಯಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಮತ್ತೊಂದು ಕಳವಳಕಾರಿ ವಿಚಾರವಾಗಿದೆ ಎಂದು ಮಾಹಿತಿ ನೀಡಿದರು.

ಲೈಂಗಿಕ ದೌರ್ಜನ್ಯ, ಸ್ವಚ್ಛಂದತೆಗೆ ತೊಡಕು, ಕಿರಿಯ ವಯಸ್ಸಿನಲ್ಲಿಯೇ ವಿವಾಹ ಬಂಧ, ವರದಕ್ಷಿಣೆ ಕಿರುಕುಳ ಮತ್ತಿತರ ಕಾರಣಗಳು ಮಹಿಳೆಯರು ಸಣ್ಣ ವಯಸ್ಸಿನಲ್ಲಿಯೇ ಜೀವ ಹತ್ಯೆಗೆ ಮುಂದಾಗಲು ಕಾರಣವಾಗಿದೆ. ತಮಗೆ ದೊರಕದ ನಿರೀಕ್ಷಿತ ಪ್ರೀತಿಯಿಂದಾಗಿ ಬೇಸತ್ತು ಅನೇಕ ಮಹಿಳೆಯರು ಸಾವಿಗೆ ಶರಣಾಗುತ್ತಿರುವುದು ಆಧುನಿಕ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಸಮಾಜ ಈ ಬಗ್ಗೆ ಗಂಭೀರ ಗಮನ ಹರಿಸಬೇಕಾಗಿದೆ ಎಂದೂ ಡಾ.ಅಲ್ಕಾ ಎಚ್ಚರಿಸಿದರು.

Advertisement

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ 32,325 ರೈತರು, ಅನಾರೋಗ್ಯದಿಂದ  2600, ವರದಕ್ಷಿಣೆ ಕಿರುಕುಳದಿಂದ 2267, ಕಾರಣಗಳು ತಿಳಿದಿಲ್ಲದೇ 20900, ಪ್ರೇಮವೈಪಲ್ಯತೆಯಿಂದ 4500 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಯುವಭಾರತೀಯರು ಹಾಗೂ ಮಹಿಳೆಯರ ಸಂಖ್ಯೆ ಶೇ.60 ರಷ್ಟಿರುವುದು ಭವಿಷ್ಯದ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಬೇಕೆಂದೂ ಡಾ.ಅಲ್ಕಾ ಸುಬ್ರಹ್ಮಣ್ಯಂ ಹೇಳಿದರು.

ಪರೀಕ್ಷೆಯ ಭಯ, ಕೆಟ್ಟವರ ಸಾಂಗತ್ಯ, ಮೊಬೈಲ್ ಗೀಳು, ಏಕಾಂಗಿತನ, ಆತ್ಮವಿಶ್ವಾಸದ ಕೊರತೆಯೇ ಇಂತಹ ಆತ್ಮಹತ್ಯೆಗೆ ಪ್ರಮುಖ ಕಾರಣಗಳೆಂದು ವಿಶ್ಲೇಷಿಸಿದ ಡಾ.ಅಲ್ಕಾ, ಪ್ರತೀ 6 ನಿಮಿಷಕ್ಕೆ ಓರ್ವ ಭಾರತೀಯರು ಆತ್ಮಹತ್ಯೆಗೆ ಶರಣಾಗುತ್ತಿದ್ದು ಈ ಮನೋಭಾವ ಮುಂದುವರೆದಲ್ಲಿ ಸದ್ಯದಲ್ಲಿಯೇ ವಿಶ್ವದಲ್ಲಿಯೇ ಭಾರತ ಅತ್ಯಧಿಕ ಆತ್ಮಹತ್ಯೆ ಪ್ರಕರಣಗಳ ದೇಶವಾಗಿ ಬಿಂಬಿತವಾಗಲಿದೆ ಎಂದು ವಿಷಾದಿಸಿದರು.

ಜೀವನದ ಬಗ್ಗೆ ಆಶಾಭಾವನೆ ಮೂಡಿಸುವ ನಿಟ್ಟಿನಲ್ಲಿ ಭಾರತದ ಶಿಕ್ಷಣ ಪದ್ದತಿಯಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯ ಎಂದು ಹೇಳಿದ ಡಾ.ಅಲ್ಕಾ, ಶಿಕ್ಷಕರು, ಪೋಷಕರಿಗೆ ಸೂಕ್ತ ತರಬೇತಿ, ಅನುತೀರ್ಣತೆಯಿಲ್ಲದ ಶಿಕ್ಷಣ ನೀತಿ, ಬಾಲ್ಯದಲ್ಲಿಯೇ ಜೀವನದ ಬಗ್ಗೆ ಆತ್ಮವಿಶ್ವಾಸ ಮೂಡಿಸುವಂತಹ ಶಿಕ್ಷಣ ಭಾರತದಲ್ಲಿ ದೊರಕಬೇಕು. ಹೀಗಾದಾಗ ಮಾತ್ರ ಯುವಭಾರತೀಯರು ಸಾವಿನ ನಿರ್ಧಾರ ಕೈಗೊಳ್ಳಲಾರರು ಎಂದೂ ಡಾ.ಅಲ್ಕಾ ಹೇಳಿದರು.

ಮಾಧ್ಯಮಗಳು ತಮ್ಮ ಟಿ.ಆರ್.ಪಿ.ಗಾಗಿ ಅತಿರಂಜಿತ ವರದಿಗಳಿಂದ ಸಾವಿನ ಪ್ರಕರಣ ವೈಭವೀಕರಿಸುತ್ತಿವೆ ಎಂದು ದೂರಿದ ಡಾ.ಅಲ್ಕಾ, ಫೇಸ್ ಬುಕ್ ನಲ್ಲಿ ಲೈವ್ ನೀಡುತ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೊಸ ಅಪಾಯಕಾರಿ ಟ್ರೆಂಡ್ ಗೆ ಕಡಿವಾಣ ಹಾಕದಿದ್ದರೆ ಯುವಭಾರತೀಯರು ದಿಕ್ಕು ತಪ್ಪುವ ಎಲ್ಲಾ ಸಾಧ್ಯತೆಗಳಿವೆ ಎಂದೂ ಹೇಳಿದರು.

Advertisement

ಯುವಭಾರತೀಯರ ಗುರಿ ಮತ್ತು ಉದ್ದೇಶ ವಿಚಾರದ ಬಗ್ಗೆ ಉಪನ್ಯಾಸ ನೀಡಿದ ಹೈದರಾಬಾದ್ ನ ಮಾನಸಿಕ ಆರೋಗ್ಯ ಸಂಶೋಧಕ ಡಾ.ಜಿ.ಪ್ರಸಾದ್‍ರಾವ್, ಹಣ, ವೃತ್ತಿ, ಜೀವನಶೈಲಿಯ ಬೆಂಬತ್ತಿ ಸಾಗುತ್ತಿರುವ ಯುವಪೀಳಿಗೆಯ ಭಾರತದಲ್ಲಿ ಹಿಂದಿನ ದಿನಗಳಿಗೆ ಹೋಲಿಸಿದರೆ, ಈಗಿನ ಯುವಕ,ಯುವತಿಯರು ಸಂಪೂರ್ಣವಾಗಿ ಮಾನಸಿಕ ಬದಲಾವಣೆ ಹೊಂದಿದ್ದಾರೆ. ದೇಶದಲ್ಲಿ 310 ಮಿಲಿಯನ್ ಯುವಪೀಳಿಗೆಯವರಿದ್ದು ಸೂಕ್ತ ಮಾರ್ಗ ದರ್ಶನ  ನೀಡಿದ್ದೆ ಆದಲ್ಲಿ ಇವರು ದೇಶದ ಆಸ್ತಿಯಾಗುತ್ತಾರೆ. ಇಲ್ಲದಿದ್ದಲ್ಲಿ ಸೂಕ್ತ ಮಾರ್ಗ ವಿಲ್ಲದೇ ಅನಾಹುತಕ್ಕೆ ಕಾರಣವಾಗಲಿದ್ದಾರೆ ಎಂದು ಎಚ್ಚರಿಸಿದರು.

ಇಂದಿನ ಯುವಪೀಳಿಗೆಯಲ್ಲಿ ಅತೃಪ್ತಿಯ ಮನೋಭಾವಕಾಡುತ್ತಿದೆ. ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ದೊರಕುತ್ತಿಲ್ಲ . ತಾನು, ತನ್ನ ಕುಟುಂಬಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ತನ್ನ ಕೊಡುಗೆ ಬೇಕು ಎಂಬ ಕಳಕಳಿ ಕಂಡುಬರುತ್ತಿದೆ. ಹೀಗಾಗಿ ಬಹುತೇಕ ಯುವಪೀಳಿಗೆ ಕುಟುಂಬವನ್ನು ನಿರ್ಲಕ್ಷಿಸಿ ಸಮಾಜ,ದೇಶದ ಏಳಿಗೆಯತ್ತ ಆಸಕ್ತರಾಗಿದ್ದಾರೆ. ತನಗೆಲ್ಲಾ ತಿಳಿದಿದೆ ಎಂಬ ಭಾವನೆ ಬಾಲ್ಯದಲ್ಲಿಯೇ ಕಂಡುಬರುತ್ತಿರುವುದರಿಂದಲೇ ಹಿರಿಯರ ಮಾತಿಗೂ ಗೌರವ ನೀಡುತ್ತಿಲ್ಲ ಎಂದು ಪರಾಮರ್ಶಿಸಿದ ಡಾ.ಪ್ರಸಾದ್‍ರಾವ್, ಯುವತಿಯರು ಮದುವೆಯಿಂದ ವಿಮುಖರಾಗುತ್ತಿದ್ದಾರೆ. ಒಂಟಿಯಾಗಿ ಬಾಳಬಲ್ಲೆ ಎಂಬ ಮನೋಸ್ಥೆರ್ಯ ಹೆಚ್ಚಾಗುತ್ತಿದೆ. ಗಂಡ, ಮಕ್ಕಳಿಲ್ಲದೇ ತಾನು ಸಂತೋಷವಾಗಿರಬಲ್ಲೆ ಎಂದು ಇಂದಿನ ತರುಣಿಯರು ಭಾವಿಸಿದ್ದಾರೆ. ಹೀಗಾಗಿ ತರುಣಿಯರಲ್ಲಿ ವಿವಾಹದ ಬಗ್ಗೆ ಹಿಂದಿನ ಕಾಲಕ್ಕೆ ಹೋಲಿಸಿದರೆ ಆಸಕ್ತಿಯೇ ಕಾಣುತ್ತಿಲ್ಲ ಎಂದು ವಿಶ್ಲೇಶಿಸಿದ ಪ್ರಸಾದ್‍ ರಾವ್, ಸಾಮಾಜಿಕ ಜಾಲತಾಣಗಳು ಇಂದಿನ ಯುವಪೀಳಿಗೆಯ ಮಾರ್ಗದರ್ಶಕವಾದಂತಿದೆ. ಎಲ್ಲವನ್ನೂಗೂಗಲ್ ನಲ್ಲಿಯೇ ಕಂಡುಕೊಂಡು ಅದನ್ನೇಗುರುವಾಗಿ ಸ್ವೀಕರಿಸಿರುವುದು ಚರ್ಷಾಸ್ಪದ ಎಂದೂ ಹೇಳಿದರು. ನವಭಾರತದ ಸಂಕಲ್ಪದಿಂದಾಗಿ ನವಭಾರತೀಯರು ಮಾನಸಿಕವಾಗಿ ಬದಲಾಗಿದ್ದಾರೆ ಎಂದೂ ಡಾ.ಪ್ರಸಾದ್‍ ರಾವ್ ಅನಿಸಿಕೆ ವ್ಯಕ್ತಪಡಿಸಿದರು.

ಡಿಜಿಟಲ್‍ ಚಿಕಿತ್ಸಾ ವಿಧಾನ ವಿಚಾರವಾಗಿ ಉಪನ್ಯಾಸ ನೀಡಿದ ಬೆಂಗಳೂರಿನ ಮಾನಸಿಕ ತಜ್ಞ ಡಾ.ಮೋಹನ್ ಸುನೀಲ್‍ಕುಮಾರ್, ಮಾನಸಿಕ ತಜ್ಞರು ವಿಭಿನ್ನವಾಗಿ ಚಿಂತಿಸುವ ಅನಿವಾರ್ಯತೆ ಬಂದೊದಗಿದೆ. ಕೊಂಚವೂ ವಿರಾಮವಿಲ್ಲದ ಜನರಿಗೆ ಡಿಜಿಟಲ್ ವಿಧಾನದಲ್ಲಿಯೇ ಚಿಕಿತ್ಸೆ ನೀಡುವ ಅನಿವಾರ್ಯತೆಯಲ್ಲಿ ವೈದ್ಯರಿದ್ದಾರೆ. ಹೀಗಾಗಿ ಮನೋವೈದ್ಯರು ಆದುನಿಕ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಮಾಹಿತಿಗಳ ಕಣಜವಾಗಬೇಕಾಗಿದೆ ಎಂದು ಕರೆ ನೀಡಿದರು. ಜಗತ್ತು ಎಷ್ಟೇ ಆಧುನೀಕರಣಗೊಂಡರೂ,ಚಿಕಿತ್ಸಾ ವಿಧಾನಗಳಲ್ಲಿ ನವನವೀನ ತಂತ್ರಜ್ಞಾನ ಬಂದರೂ ಮನುಷ್ಯರ ಪ್ರೀತಿ, ಮಮತೆ ನೀಡುವ ಆರೈಕೆಯನ್ನು ಬೇರೆ ಯಾವುದೂ ನೀಡಲು ಅಸಾಧ್ಯಎಂದೂ ಡಾ.ಮೋಹನ್ ಹೇಳಿದರು.

ಬೆಂಗಳೂರಿನ ವೈದ್ಯೆ ಡಾ.ಹೇಮಾ ತರೂರು ಮಾತನಾಡಿ, ಮಾನಸಿಕ ಆರೋಗ್ಯ ಸುಧಾರಣಾ ಯೋಜನೆಗಳಿಗೆ ಸರಕಾರದೊಂದಿಗೆ ಸರಕಾರೇತರ ಸಂಸ್ಥೆಗಳೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

Advertisement

ಮತ್ಸರದಿಂದ ಮಾನಸಿಕ ತಲ್ಲಣ ವಿಚಾರಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದ ತೆಲಂಗಾಣದ ನಾರ್ಕೇಟಪಳ್ಳಿ ವಿಶ್ವವಿದ್ಯಾನಿಲಯದ ಡಾ. ಪ್ರವೀಣ್‍ ಕೈಕರ್ಯ , ಬಹಿರಂಗಪಡಿಸಲಾಗದ ಇರ್ಷೆ ,ಮಾನಸಿಕ ಕಳವಳಗಳಿಂದಾಗಿ ಮಾತ್ಸರ್ಯ ಮನೋಭಾವ ಉಂಟಾಗುತ್ತಿದೆ. ಇಂದಿನ ಸ್ಪರ್ಧಾ  ಯುಗದಲ್ಲಿ ಮತ್ಸರವೇ ಅನೇಕ ಕಾಯಿಲೆಗಳಿಗೆ ಮೂಲವಾಗಿದೆ. ಮತ್ಸರಗುಣ ಮಾನವನ ವಿಪತ್ತಿಗೂ ಕಾರಣವಾಗಬಲ್ಲದು ಎಂದು ಎಚ್ಚರಿಸಿದರು.

ನಿದ್ರಾಹೀನತೆ ಬಗ್ಗೆ ಮಾಹಿತಿ ನೀಡಿದ ಪಾಂಡಿಚೇರಿಯ ಡಾ.ವಿವೇಕ್ ಮೆನನ್, ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಕೆ ಹಾಗೂ ಮೊಬೈಲ್ ಸೇರಿದಂತೆ ಸಾಮಾಜಿ ಜಾಲತಾಣಗಳ ವ್ಯಸನದಿಂದಾಗಿ ನಿದ್ರಾಹೀನತೆ ಭಾರತೀಯರಲ್ಲಿ ಇತ್ತೀಚಿನ ವರ್ಷದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಾಡುತ್ತಿದೆ. ನಿದ್ರಾಹೀನತೆ ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ಕನಿಷ್ಟ ಪಕ್ಷ ನಿದ್ರಾಕೋಣೆಗೆ ಮೊಬೈಲ್‍ ಕೊಂಡೊಯ್ಯದೆ ಮನಸ್ಸಿಗೆ ಹಾಯಾದ ವಿರಾಮದ ಸಮಯವನ್ನು ನಿದ್ರೆಯ ಮೂಲಕ ನೀಡಿ ಎಂದು ಕರೆ ನೀಡಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹವಾಮಾನ ವರದಿ | 24-07-2025 | ಜು.29 ರಿಂದ ಮಳೆ ಕಡಿಮೆ ನಿರೀಕ್ಷೆ..? | ಕೃಷಿಕರಿಗೆ ಪೂರಕವಾಗಬಹುದೇ ಹವಾಮಾನ..?
July 24, 2025
11:54 AM
by: ಸಾಯಿಶೇಖರ್ ಕರಿಕಳ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ
ನಿಮ್ಮ ಆರೋಗ್ಯವನ್ನು ಪುನರುಜ್ಜೀವನಗೊಳಿಸಿ | 10 ಆಶ್ಚರ್ಯಕರ ಆಯುರ್ವೇದ ಉಪಾಯಗಳು !
July 24, 2025
7:15 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group