ತಿರುವನಂತಪುರ: ಜನವರಿ 30, 2020. ದೇಶದಲ್ಲಿ ಮೊದಲು ಕೊರೊನಾ ಪಾಸಿಟಿವ್ ಕಂಡುಬಂದ ದಿನ.
ದೇಶದ ಪುಟ್ಟ ರಾಜ್ಯ ಕೇರಳದಲ್ಲಿ ಕೊರೊನಾ ಪಾಸಿಟಿವ್ ಬಂದ ತಕ್ಷಣವೇ ಕೇರಳ ಸರಕಾರ ಎಚ್ಚೆತ್ತುಕೊಂಡಿತ್ತು. ಏಕೆಂದರೆ ಕೇರಳದ ಇತಿಹಾಸ ಹಾಗಿತ್ತು. ಈ ಹಿಂದೆಯೇ ನಿಫಾ ಕೇರಳವನ್ನು ಕಾಡಿತ್ತು.ನಿಫಾ ಕಲಿಸಿದ ಪಾಠ ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಯಿತು. ಈಗ ಸತತ 3 ತಿಂಗಳ ಪ್ರಯತ್ನದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದೆ.ಅದೂ ಅಲ್ಲದೆ ಅತೀ ಕಡಿಮೆ ಸಂಖ್ಯೆಯಲ್ಲಿ ಅಂದರೆ ಕೇವಲ 4 ಮಂದಿ ಮಾತ್ರವೇ ಮೃತಪಟ್ಟಿದ್ದಾರೆ.
ಕೇರಳ ಸರಕಾರ ಮಾಡಿದ್ದು ಕ್ವಾರಂಟೈನ್ ಕಟ್ಟುನಿಟ್ಟಾಗಿ ಆಚರಣೆ ಹಾಗೂ ಜನರಲ್ಲಿ ಜಾಗೃತಿ. ಅದೆಷ್ಟೂ ಜಾಗೃತಿ ವಿಡಿಯೋಗಳು ಜನರ ಮೊಬೈಲ್ ಗಳಲ್ಲಿ ಹರಿದಾಡಿತು. ಸಣ್ಣ ಸಣ್ಣ ಸಂಘಟನೆಗಳೂ ಜಾಗೃತಿ ಮೂಡಿಸಿದರು. ಸ್ಯಾನಿಟೈಸರ್ ಬಳಕೆ, ಮಾಸ್ಕ್ , ಸಾಮಾಜಿಕ ಅಂತರ, ಖರೀದಿಗಳಲ್ಲಿ ನಿಯಂತ್ರಣ ಸೇರಿದಂತೆ ಹಲವು ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರಕಾರ ಸೂಚಿಸಿತು, ಜನರು ಸ್ವಯಂ ರಕ್ಷಣೆಗೆ ಕಟ್ಟುನಿಟ್ಟಾಗಿ ಅವರೇ ಆಚರಣೆ ತಂದರು ಎನ್ನುವುದು ಗಮನಾರ್ಹ.
ಚೀನಾದ ವುಹಾನ್‌ನಿಂದ ಬಂದಿದ್ದ ಕೇರಳದ ವಿದ್ಯಾರ್ಥಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ತಕ್ಷಣವೇ ಕೇರಳ ಸರಕಾರ ಎಚ್ಚೆತ್ತುಕೊಂಡಿತು. ಏಕೆಂದರೆ ಅದಾದಗಲೇ ವುಹಾನ್ ನಲ್ಲಿ ಕೊರೊನಾ ವ್ಯಾಪಕವಾಗಿತ್ತು, 150 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಚೀನಾ ವುಹಾನ್ ನಲ್ಲಿ ಸತತ ಪ್ರಯತ್ನ ಮಾಡುತ್ತಿತ್ತು. ಹೀಗಾಗಿ ಕೇರಳ ಸರಕಾರ ತಕ್ಷಣವೇ ಸಿದ್ದವಾಗಿತ್ತು. ಹಾಗಿದ್ದರೂ ಕೊರೊನಾ ವೈರಸ್ ಕೇರಳದಲ್ಲಿ ಹರಡಿತ್ತು, ಇದುವರೆಗೆ 503 ಕೊರೊನಾ ವೈರಸ್ ಪ್ರಕರಣ ಕಂಡುಬಂದಿತ್ತು. ಅದರಲ್ಲೂ ಕಾಸರಗೋಡು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವೈರಸ್ ಹರಡಿದ ಪ್ರದೇಶವೂ ಆಗಿತ್ತು. ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಕೇರಳದಲ್ಲೇ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಈಗ ಕಾಸರಗೋಡು ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಇಡೀ ಕೇರಳದಲ್ಲಿ 16 ಮಾತ್ರವೇ ಸಕ್ರಿಯವಾದ ಕೊರೊನಾ ಪ್ರಕರಣಗಳು ಇವೆ. ಕಳೆದ 8 ದಿನಗಳಿಂದ 6 ಮಾತ್ರಾ ಕೊರೊನಾ ಪಾಸಿಟಿವ್ ಕಂಡುಬಂದಿದೆ..!. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರ ಪ್ರಮಾಣ ಶೇಕಡಾ 30 ರಷ್ಟಿದ್ದರೆ, ಕೇರಳದಲ್ಲಿ ಅದು ಶೇಕಡಾ 90 ಕ್ಕಿಂತ ಹೆಚ್ಚಿದೆ. ಹೀಗಾಗಿ ಚೀನಾ ಸಹಿತ ಪ್ರಪಂಚದ ಎಲ್ಲಾ ರಾಷ್ಟ್ರಗಳೂ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಟ್ಟರೆ ಕೇರಳ ನಿಯಂತ್ರಣಕ್ಕೆ ತಂದಿದೆ.