ಮಡಿಕೇರಿ : ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿರುವ ಬಿಜೆಪಿ ನೇತೃತ್ವದ ಸರಕಾರ ಜನಪರವಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ತೋರದೆ ಅಧಿಕಾರಕ್ಕೆ ಬಂದ ತಕ್ಷಣ ಟಿಪ್ಪು ಸುಲ್ತಾನರ ಜಯಂತಿಯನ್ನು ರದ್ದುಗೊಳಿಸುವ ಮೂಲಕ ದ್ವೇಷ ರಾಜಕಾರಣವನ್ನು ಪ್ರದರ್ಶಿಸಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಕೆ.ಹ್ಯಾರಿಸ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು ದ್ವೇಷದ ರಾಜಕಾರಣ ಮಾಡುವುದಿಲ್ಲವೆಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟಿಪ್ಪು ಜಯಂತಿಯನ್ನು ರದ್ದು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕೆ ತನ್ನದೇ ಆದ ರೀತಿಯ ಕೊಡುಗೆಯನ್ನು ನೀಡಿ ಕನ್ನಡನಾಡಿನ ಮನೆ ಮಾತಾಗಿದ್ದ ಟಿಪ್ಪುವಿನ ಜಯಂತಿ ಒಂದು ಅರ್ಥಪೂರ್ಣ ಆಚರಣೆಯಾಗಿದ್ದು, ಇದನ್ನು ಸ್ಥಗಿತಗೊಳಿಸಿರುವ ಬಿಜೆಪಿ ಸರಕಾರ ಆರಂಭದಲ್ಲೇ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.
ಸರ್ವ ಜನರನ್ನು ಸಮಾನ ರೀತಿಯಲ್ಲಿ ನೋಡುತ್ತಿದ್ದ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿವರ್ಷ ಟಿಪ್ಪು ಜಯಂತಿಯನ್ನು ಸರಕಾರದ ಮೂಲಕ ಆಚರಿಸುವ ನಿರ್ಧಾರಕ್ಕೆ ಬಂದರು. ಇದನ್ನು ಅಲ್ಪಸಂಖ್ಯಾತರು ಕೂಡ ಸ್ವಾಗತಿಸಿ ಜಯಂತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಆಚರಣೆಯಿಂದ ಮಡಿಕೇರಿ ಹೊರತು ಪಡಿಸಿದಂತೆ ಬೇರೆ ಎಲ್ಲೂ ಯಾವುದೇ ರೀತಿಯ ತೊಂದರೆಯಾಗದಿದ್ದರೂ ಬಿಜೆಪಿ ನೇತೃತ್ವದ ಸರಕಾರ ಜಯಂತಿಯನ್ನು ರದ್ದುಗೊಳಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ನೋವನ್ನುಂಟು ಮಾಡಿದೆ ಎಂದು ಹ್ಯಾರಿಸ್ ಬೇಸರ ವ್ಯಕ್ತಪಡಿಸಿದ್ದಾರೆ.