ಧರ್ಮಸ್ಥಳ: ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ 48 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಿತು.
ಸಂಜೆ ಗಂಟೆ 6.48 ಕ್ಕೆ ಗೋಧೂಳಿ ಲಗ್ನದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ 102 ಜೋಡಿ ವಧೂ-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.
ಬೆಳಿಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ, ಹಾಗೂ ವರನಿಗೆ ಶಾಲು, ಧೋತಿ ನೀಡಿ ಹರಸಿದರು.
ಬಳಿಕ ಸಂಜೆ ಗಂಟೆ 5 ಕ್ಕೆ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ಪ್ರದಕ್ಷಿಣೆ ಬಂದು ಮದುವೆಯ ಸಭಾ ಭವನ “ಅಮೃತವರ್ಷಿಣಿ” ಪ್ರವೇಶಿಸಿದರು. ಬಳಿಕ ಡಾ.ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಣೆ ಮಾಡಿದರು.
ವೇದ ಘೋಷದೊಂದಿಗೆ ಮಂಗಳವಾದ್ಯ ಮೊಳಗಿದಾಗ ಒಂದೇ ಮುಹೂರ್ತದಲ್ಲಿ ಆಯಾ ಜಾತಿ – ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿ 6.48 ರ ಶುಭ ಮುಹೂರ್ತದಲ್ಲಿ ವಧು-ವರರು ಹಾರ ವಿನಿಮಯ ಮಾಡಿ ವರನು ವಧುವಿಗೆ ಮಂಗಲಸೂತ್ರ ಕಟ್ಟಿದರು. ಬಳಿಕ ನೂತನ ದಂಪತಿಗಳು ಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನ ಮಾಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿ, “ಪ್ರತಿ ವರ್ಷ ಧರ್ಮಸ್ಥಳದಲ್ಲಿ ಸರಳ ರೀತಿಯಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿದ್ದು ಇಲ್ಲಿ ಮದುವೆಯಾದವರಿಗೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಹಾಗೂ ಗುರು – ಹಿರಿಯರ ಆಶೀರ್ವಾದ ಇದೆ. ಆದುದರಿಂದ ಎಲ್ಲಿಯೂ ಭಿನ್ನಾಭಿಪ್ರಾಯ ಹಾಗೂ ಸಮಸ್ಯೆ ಕಂಡು ಬಂದಿಲ್ಲ. ಪ್ರತಿಯೊಬ್ಬರಿಗೂ ದಾಂಪತ್ಯದ ಮಹತ್ವ ಮತ್ತು ಶ್ರೇಷ್ಠತೆಯನ್ನು ತಿಳಿಸಲಾಗುತ್ತಿದೆ. ಈಗ ಅಲ್ಲಲ್ಲಿ ಧರ್ಮಸ್ಥಳದ ಮಾದರಿಯಲ್ಲಿ ಸಾಮೂಹಿಕ ವಿವಾಹಗಳು ನಡೆಯತ್ತಿರುವುದು ಸಂತಸವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ , “ಪ್ರತಿವರ್ಷ ಧರ್ಮಸ್ಥಳದಲ್ಲಿ ವೈಭವದಿಂದ ಹೆಗ್ಗಡೆಯವರ ನೇತೃತ್ವದಲ್ಲಿ ಆಯೋಜಿಸುವ ಉಚಿತ ಸಾಮೂಹಿಕ ವಿವಾಹ ಸಮಾರಂಭ ದೇಶಕ್ಕೆ ಮಾದರಿಯಾಗಿದೆ” ಎಂದು ಹೇಳಿದರು.
ಚಲನಚಿತ್ರ ನಟ ಶಿವರಾಜ್ ಕುಮಾರ್ ಮಾತನಾಡಿ, “25 ವರ್ಷಗಳ ಹಿಂದೆ ತನ್ನ ಅಪ್ಪಾಜಿ ಜೊತೆಗೆ ಬಂದು ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿರುವುದನ್ನು ಸ್ಮರಿಸಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿಸುವುದು ತನ್ನ ಭಾಗ್ಯವಾಗಿದೆ” ಎಂದರು. ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್. ಡಿ. ಹರ್ಷೇಂದ್ರ ಕುಮಾರ್, ಚಲನಚಿತ್ರ ನಿರ್ದೇಶಕ ಚಿನ್ನೇಗೌಡ, ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಆಂದ್ರಪ್ರದೇಶ ಸರ್ಕಾರದ ಕಾರ್ಯದರ್ಶಿ ಗಿರಿಜಾ ಶಂಕರ್, ಗೀತಾ ಶಿವರಾಜ್‍ಕುಮಾರ್ ಮತ್ತು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಸ್ವಾಗತಿಸಿದರು. ಪಿ. ಸುಬ್ರಹ್ಮಣ್ಯ ರಾವ್ ವಂದಿಸಿದರು. ದೀಕ್ಷಿತ್ ರೈ ಕಾರ್ಯಕ್ರಮ ನಿರ್ವಹಿಸಿದರು.