ಉಜಿರೆ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 21 ರಂದು ಶುಕ್ರವಾರ ಇಡೀ ರಾತ್ರಿ ಶಿವನಾಮ ಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಜಪ, ತಪ, ಧ್ಯಾನದೊಂದಿಗೆ ಜಾಗರಣೆ ನಡೆಯಲಿದೆ.
ಶುಕ್ರವಾರ ಸಂಜೆ ಗಂಟೆ 5.30 ರಿಂದ ಇಡೀ ರಾತ್ರಿ ನಾಲ್ಕು ಜಾವಗಳಲ್ಲಿ ಭಕ್ತರು ದೇವರ ದರ್ಶನ ಮಾಡಿ ಶತರುದ್ರಾಭಿಷೇಕ ಸೇವೆ ಸಲ್ಲಿಸುವರು. ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಕಡೆಗಳಿಂದ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ ತಲುಪುವರು. ಹತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಈಗಾಗಲೆ ಮುಂಡಾಜೆ, ಚಾರ್ಮಾಡಿ, ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಗುರುವಾರ ಪಾದಯಾತ್ರಿಗಳಿಗೆ ಉಜಿರೆಯಲ್ಲಿರುವ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಶಿವರಾತ್ರಿಗೆ 67 ತಂಡಗಳಲ್ಲಿ 16500 ಮಂದಿ ಪಾದಯಾತ್ರಿಗಳು ಬರುವುದಾಗಿ ಈಗಾಗಲೆ ಧರ್ಮಸ್ಥಳಕ್ಕೆ ಪತ್ರ ಮೂಲಕ ಖಚಿತ ಪಡಿಸಿದ್ದಾರೆ.
ಫೆ. 20ರವರೆಗೆ ಪಾದಯಾತ್ರಿಗಳು ತಂಗುವ ಶಾಲೆ, ವಸತಿಛತ್ರ ಹಾಗೂ ಭಜನಾ ಮಂದಿರಗಳಲ್ಲಿ ಪ್ರತಿ ದಿನ ಸಂಜೆ 6.30 ರಿಂದ 8.30ರ ವರೆಗೆ ಧಾರ್ಮಿಕ ಉಪನ್ಯಾಸ, ಭಜನೆ, ಪ್ರಾರ್ಥನೆ, ಧ್ಯಾನ ಮೊದಲಾದ ಸತ್ಸಂಗ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾಗಿದೆ. ಎಸ್.ಡಿ.ಎಂ.ಸಂಚಾರಿ ಆಸ್ಪತ್ರೆ ವತಿಯಿಂದ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಶುಶ್ರೂಷೆ ನೀಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಪೊಲೀಸ್ ಹೊರಠಾಣೆ, ಸ್ವಾಗತಕಚೇರಿ, ಉಚಿತ ಪಾನೀಯ ವ್ಯವಸ್ಥೆ, ಉಚಿತ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಕೆ.ಎಸ್.ಆರ್.ಟಿ.ಸಿ. ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.