ಪೆರ್ಲ: ಧಾರ್ಮಿಕ ಹಬ್ಬಗಳನ್ನು ಯಾವುದೇ ಧರ್ಮದವರು ಯಾವ ರೀತಿ ಆಚರಣೆ ಮಾಡಿದರೂ, ಅವೆಲ್ಲವೂ ಬಂದು ಸೇರುವುದು ಪರಮಾತ್ಮನ ಪಾದಕ್ಕೆ, ಆದುದರಿಂದ ಧಾರ್ಮಿಕ ಹಬ್ಬಗಳು ಭಾವೈಕ್ಯತೆ ಮೂಡಿಸುವ ಕೇಂದ್ರಗಳಾಲಿ ಎಂದು ಬಾಡೂರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶಂಕರ್ ರೈ ಹೇಳಿದರು.
ಅನುವತ್ತಡ್ಕದಲ್ಲಿ ಜರಗಿದ ಹತ್ತನೇ ವರ್ಷದ ಶ್ರೀ ಕೃಷ್ಣಾ ಜನ್ಮಾಷ್ಟಮಿಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಕೃಷ್ಣ ಪರಮಾತ್ಮನ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕ್ಕೊಳ್ಳಲು ಪ್ರಯತ್ನಿಸಬೇಕು. ಕಷ್ಟದಲ್ಲಿ ಇರುವವರೊಂದಿಗೆ ನಾವಿರಬೇಕು, ನಾಡಿನ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಬೇಕು.ಸ್ಪರ್ಧೆಗಳಲ್ಲಿ ಭಾಗವಹಿಸುವ ಮುಖಾಂತರ ಬುದ್ಧಿ ಶಕ್ತಿಯ ಬೆಳವಣಿಗೆ ಹಾಗೂ ನಮ್ಮೊಳಗಿನ ಪ್ರತಿಭೆಗಳನ್ನು ಪ್ರದರ್ಶಿಸಲು ಸಾಧ್ಯ.ಇಂತಹ ಕಾರ್ಯಕ್ರಮಗಳಲ್ಲಿ ಸ್ಥಳೀಯ ಪ್ರತಿಭೆಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು ಗುರುತಿಸಿ ಹತ್ತು ಜನರ ಮುಂದೆ ಅಭಿನಂದಿಸುವ ಕಾರ್ಯ ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಅಧ್ಯಾಪಕ ಸುಧೀರ್ ಕೃಷ್ಣ ಮಾತನಾಡಿ, ಶ್ರೀ ಕೃಷ್ಣನ ತಾಯಿ ದೇವಕಿಯ ನಿರಂತರ ಪ್ರಾರ್ಥನೆ, ಧ್ಯಾನದಿಂದಾಗಿ ಶ್ರೀ ಕೃಷ್ಣ ಜನಿಸಿದ, ಅದೇ ರೀತಿ ನಾವು ಪ್ರತಿಯೊಬ್ಬರೂ ನಿರಂತರ ಶ್ರಮ ಪಟ್ಟಲ್ಲಿ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.ನಾವು ಯಾವುದೇ ಸಾಧನೆ ಮಾಡಲು ಯತ್ನಿಸುವಾಗ ಒಂದೇ ಸಲದಲ್ಲಿ ನಾವು ಯಶಸ್ವಿಯಾಗದಿದ್ದರೂ, ಹಿನ್ನಡೆ ಅನುಭವಿಸಿದರೂ, ನಿರಂತರ ಮರು ಪ್ರಯತ್ನದಿಂದಾಗಿ ಖಂಡಿತವಾಗಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ.ಉಳಿದ ಪ್ರಾಣಿಗಳಿಂದ ವ್ಯತ್ಯಸ್ತನಾದ ಮಾನವನಲ್ಲಿ ಮಾನವೀಯತೆಯ, ಉಳಿದವರ ಕಷ್ಟಕ್ಕೆ ಸ್ಪಂದಿಸುವ, ನಮ್ಮಿಂದಾದ ಸಹಾಯ ಮಾಡುವ, ಪ್ರೀತಿಯಿಂದ ಮಾತನಾಡುವ ಗುಣ ಬೆಳೆಸಬೇಕು ಎಂದರು.
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಥಳೀಯ ನಾಟಿ ವೈದ್ಯ ಮಹಾಲಿಂಗ ನಾಯ್ಕ ಪಳ್ಳತಮೂಲೆ, ಉಂಬೈ ಅನುವತ್ತಡ್ಕ, ರಾಮಣ್ಣ ಪತ್ತಡ್ಕ ಉಪಸ್ಥಿತರಿದ್ದರು.
ಮಾಲಿಂಗ ಪಳ್ಳತಮೂಲೆ ಸ್ವಾಗತಿಸಿದರು. ಸೌಮ್ಯ ವಂದಿಸಿದರು. ಗೋಪಾಲ ಮಾಸ್ಟರ್ ನಿರೂಪಿಸಿದರು.