ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ಸಹಯೋಗದಲ್ಲಿ ‘ನಮ್ಮ ನಡೆ ವಿದ್ಯಾರ್ಥಿಗಳೆಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಸುಳ್ಯ ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳಲ್ಲಿ 5 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ `ಸಾಹಿತ್ಯ ಸಂಭ್ರಮ’ ನ.1ರಿಂದ 7ರ ತನಕ ನಡೆಯಲಿದೆ.
ನ.1 ರಂದು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಸಾಹಿತ್ಯ ಸಂಭ್ರಮ ಉದ್ಘಾಟನೆ ಹಾಗೂ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಅರಂತೋಡು ನೆಹರು ಸ್ಮಾರಕ ಪ. ಪೂ. ಕಾಲೇಜಿನ ವಿದ್ಯಾರ್ಥಿನಿ ಗಾನಶ್ರೀ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಲಲಿತಾಜ ಮಲ್ಲಾರ ನೆರವೇರಿಸಲಿದ್ದಾರೆ. ಸಮ್ಮೇಳನದಲ್ಲಿ ಕರ್ನಾಟಕದಲ್ಲಿ ಕನ್ನಡದ ಇಂದಿನ ಸ್ಥಿತಿಗತಿ’ ಎಂಬ ವಿಚಾರದ ಬಗ್ಗೆ ವಿಚಾರ ಗೋಷ್ಠಿ ನಡೆಯಲಿದೆ. ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೀತಿ ಯು.ಭಟ್ ವಿಚಾರ ಮಂಡನೆ ಮಾಡಲಿದ್ದಾರೆ. ಬಳಿಕ ವಿದ್ಯಾರ್ಥಿಗಳ ಕವಿಗೋಷ್ಠಿ ನಡೆಯಲಿದೆ.
ನ.2 ರಂದು ಸಾಧನಾ ಶೃಂಗ-ಸಾಹಿತ್ಯ ಸಂಭ್ರಮ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ನ.3ರಂದು ದಿ.ಪಡ್ಡಂಬೈಲು ವೆಂಕಟ್ರಮಣ ಗೌಡರ ಸ್ಮರಣಾರ್ಥ ‘ಜೀವನ ಮೌಲ್ಯಗಳು’ ಎಂಬ ಉಪನ್ಯಾಸ ಕಾರ್ಯಕ್ರಮ ಸಂಧ್ಯಾ ಚೇತನ ಹಿರಿಯ ನಾಗರಿಕರ ಸಂಘ ಸುಳ್ಯ ಹಾಗೂ ಸಂದ್ಯಾರಶ್ಮಿ ಪಿಂಚಣಿದಾರರ ಸಂಘ ಸುಳ್ಯ ಇದರ ಸಹಯೋಗದಲ್ಲಿ ನಡೆಯಲಿದೆ.
ನ.4ರಂದು ಸಿ.ಸಿ.ಆರ್.ಟಿ. ಗ್ರೂಪ್ ಸುಳ್ಯ, ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇವರ ಸಹಕಾರದಲ್ಲಿ ಸುಳ್ಯ ತಾಲೂಕಿನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ನಾಣ್ಯಗಳ ಪ್ರದರ್ಶನ ಹಾಗೂ ಸ್ಪರ್ಧಾ ಕಾರ್ಯಕ್ರಮ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆಯಲಿದೆ. ನ.5 ರಂದು ಸರಕಾರಿ ಪ್ರೌಢಶಾಲೆ ಎಣ್ಮೂರು ಹಾಗೂ ಸುಳ್ಯ ತಾಲೂಕು ಚಿತ್ರಕಲಾ ಶಿಕ್ಷಕರ ಸಂಘದ ಸಹಕಾರದಲ್ಲಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
ನ.6ರಂದು ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವವಿದ್ಯಾಲಯದ ಸಹಕಾರದಲ್ಲಿ ಮಹಿಳಾ ಸಾಹಿತ್ಯ ಸಂಭ್ರಮ ನಡೆಯಲಿದೆ. ‘ಜಾನಪದ ಸಾಹಿತ್ಯದಲ್ಲಿ ಸ್ತ್ರೀಸಂವೇದನೆ’ ಎಂಬ ವಿಷಯದ ಬಗ್ಗೆ ಪ್ರವಚನ ನಡೆಯಲಿದೆ. ನ.7 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದಲ್ಲಿ ‘ಜಯಹೇ ಕರ್ನಾಟಕ ಮಾತೆ’ ಗೀತಕಥಾ ಕಲಾಕ್ಷೇಪ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು ಖ್ಯಾತ ಗಾಯಕ ಶಶಿಧರ ಕೋಟೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ ಹಾಗೂ ಸುವಿಚಾರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.