ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಅಭ್ಯರ್ಥಿ ಘೋಷಣೆ ಅಂತಿಮಗೊಳ್ಳುತ್ತಿದ್ದಂತೆ ಸುಳ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಬೋರುಗುಡ್ಡೆ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದ ಆರ್.ಕೆ.ಮಹಮ್ಮದ್ ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರಾಕರಣೆಯ ಹಿನ್ನಲೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಬೋರುಗುಡ್ಡೆ ವಾರ್ಡ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸುವುದಾಗಿ “ಸುಳ್ಯನ್ಯೂಸ್.ಕಾಂ” ಗೆ ತಿಳಿಸಿದ್ದಾರೆ.
ಬೋರುಗುಡ್ಡೆ ಯಲ್ಲಿ ಅಭ್ಯರ್ಥಿತನಕ್ಕೆ ಆರ್.ಕೆ.ಮಹಮ್ಮದ್ ಕೊನೆಯ ಕ್ಷಣದವರೆಗೂ ರೇಸ್ ನಲ್ಲಿದ್ದರು. ಆದರೆ ಇದೀಗ ಬೋರುಗುಡ್ಡೆ ವಾರ್ಡ್ ನ ಅಭ್ಯರ್ಥಿಯಾಗಿ ಕೆ.ಎಂ.ಮುಸ್ತಫಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕ್ರಮದಿಂದ ಅಸಮಾಧಾನಗೊಂಡು ಆರ್.ಕೆ. ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ತನ್ನ ವಾರ್ಡ್ ನ ಮತದಾರರ ಮತ್ತು ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾಗಿ ಆರ್.ಕೆ.ಮಹಮ್ಮದ್ ‘ಸುಳ್ಯನ್ಯೂಸ್. ಕಾಂ ಗೆ ತಿಳಿಸಿದ್ದಾರೆ.
ನಗರ ಪಂಚಾಯತ್ ನ ಕಳೆದ ಮೂರು ಚುನಾವಣೆಯಲ್ಲೂ ಅಭ್ಯರ್ಥಿತನಕ್ಕೆ ಇವರ ಹೆಸರು ಕೇಳಿ ಬಂದಿತ್ತು. ಆದರೆ ಅವಕಾಶ ದೊರೆಯಲಿಲ್ಲ. ಈ ಹಿಂದೆ ಎರಡು ಬಾರಿ ಇವರು ನ.ಪಂ.ಚುನಾವಣೆಗೆ ನಾಮಪತ್ರವನ್ನೂ ಸಲ್ಲಿಸಿದ್ದರು. ಆದರೆ ಪಕ್ಷದ ಒತ್ತಡಕ್ಕೆ ಮಣಿದು ಹಿಂಪಡೆದಿದ್ದರು.
ಈ ಮಧ್ಯೆ ನಾವೂರು ವಾರ್ಡ್ ನ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಾಫಿ ಕುತ್ತಮೊಟ್ಟೆ ಅವರು ಕೂಡಾ ಪಕ್ಷದಿಂದ ಟಿಕೆಟ್ ಲಭ್ಯವಾಗದ ಹಿನ್ನೆಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.