ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆಗೆ ಸಿದ್ಧವಾಗಲಿದೆ.
ಪ್ರತಿ ವಾರ್ಡ್ ಗಳಲ್ಲಿಯೂ ಕಾರ್ಯಕರ್ತರ ಸಭೆ ನಡೆಸಿ ಅಲ್ಲಿ ಸೂಚಿಸಲ್ಪಟ್ಟ ಅಭ್ಯರ್ಥಿ ಗಳ ಪಟ್ಟಿಯನ್ನು ತಯಾರಿಸಿ ಮಂಡಲ ಸಮಿತಿಗೆ ಕಳಿಸಲಾಗಿದೆ. ಮಂಡಲ ಸಮಿತಿಯ ಪ್ರಮುಖರನ್ನೊಳಗೊಂಡ ಚುನಾವಣಾ ನಿರ್ವಹಣಾ ಸಮಿತಿ ಮತ್ತು ನಗರ ಶಕ್ತಿ ಕೇಂದ್ರದ ಪದಾಧಿಕಾರಿಗಳು ಪಟ್ಟಿಯನ್ನು ಪರಿಶೀಲನೆ ನಡೆಸಿ ಅಳೆದು ತೂಗಿ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು. ಒಬ್ಬರೇ ಆಕಾಂಕ್ಷಿ ಇರುವ ಕಡೆ, ಮೀಸಲು ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಆಯ್ಕೆ ಬಹುತೇಕ ಅಂತಿಮಗೊಳಿಸಲಾಗಿದೆ. 3-4 ಹೆಸರುಗಳು ಇರುವ ಕಡೆ ಅಭ್ಯರ್ಥಿಯ ಆಯ್ಕೆಯ ಚರ್ಚೆ ನಡೆಯುತಿದೆ. ಶನಿವಾರ ಸಂಜೆಯ ವೇಳೆಗೆ ಬಹುತೇಕ ಪಟ್ಟಿ ಸಿದ್ಧಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಸೋಮವಾರದಿಂದ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಕೆಲವೆಡೆ ಆಕಾಂಕ್ಷಿಗಳ ಸಾಲು ಉದ್ದ ಇದ್ದು ಅಭ್ಯರ್ಥಿಯನ್ನು ಅಂತಿಮಗೊಳಿಸಲು ಮ್ಯಾರಥಾನ್ ಚರ್ಚೆ ನಡೆಯುತ್ತಿದೆ. ಬಹುತೇಕ ವಾರ್ಡ್ ಗಳಲ್ಲಿ ಮೂರು ಮತ್ತು ನಾಲ್ಕು ಹೆಸರುಗಳು ಸೂಚಿಸಲ್ಪಟ್ಟಿದೆ. ನಗರ ಪಂಚಾಯತ್ ನ ಸಾಮಾನ್ಯ ಮಹಿಳಾ ವಾರ್ಡ್ ಒಂದರಲ್ಲಿ 8 ಮಂದಿ ಆಕಾಂಕ್ಷಿಗಳಿರುವುದು ಕುತೂಹಲ ಕೆರಳಿಸಿದೆ.
ಶೇ. 100 ರಷ್ಟು ಹೊಸ ಮುಖಗಳ ಆಯ್ಕೆಗೆ ಬಿಜೆಪಿ ನೇತೃತ್ವ ಒತ್ತು ನೀಡಿದೆ. ಹಳೆಯ ಎಲ್ಲಾ ಸದಸ್ಯರನ್ನೂ ಬದಲಿಸಿ ನಗರ ಪಂಚಾಯತ್ ನ 20 ವಾರ್ಡ್ ಗಳಲ್ಲಿಯೂ ಹೊಸ ಅಭ್ಯರ್ಥಿ ಆಯ್ಕೆಗೆ ಪ್ರಯತ್ನ ನಡೆಸುತ್ತಿರುವುದಾಗಿ ಮುಖಂಡರು ತಿಳಿಸಿದ್ದಾರೆ. ಆದರೆ ಕೆಲವು ಮಂದಿ ಮಾಜಿ ಸದಸ್ಯರು ಟಿಕೆಟ್ ಬೇಡಿಕೆ ಮುಂದಿಟ್ಟಿರುವುದಾಗಿ ತಿಳಿದು ಬಂದಿದೆ. ಇದರಿಂದ ಕೊನೆಯ ಕ್ಷಣದಲ್ಲಿ ಒಂದೆರಡು ಮಂದಿ ಹಳೆಯ ಮುಖಗಳು ಮತ್ತೆ ಕಣದಲ್ಲಿ ಕಾಣಿಸಿ ಕೊಳ್ಳುವ ಸಾಧ್ಯತೆಯೂ ಇದೆ.