ಸುಬ್ರಹ್ಮಣ್ಯ : ಜೀವಜಲ ಬತ್ತುತ್ತಿದೆ , ಅದರ ಜೊತೆಗೆ ಜೀವಜಲ ವಾಹಕ ನದಿಯೂ ಮಲಿನವಾದರೆ ಭವಿಷ್ಯದ ಕತೆ ಹೇಗಿರಬೇಡ. ಈ ಕಾರಣಕ್ಕೆ ಈಗಲೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ನದಿ ಸ್ವಚ್ಛತಾ ಕಾರ್ಯ ನಡೆಯಲೇಬೇಕಾದ್ದು ಇಂದಿನ ಅನಿವಾರ್ಯ ಎಂದು ರಾಜ್ಯ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ಸ್ವಚ್ಚತಾ ಆಂದೋಲನ #ಕುಮಾರ_ಸಂಸ್ಕಾರ ದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಈಗಾಗಲೇ
ದಿಗಳ ಒಡಲಿಗೆ ಸಾಕಷ್ಟು ತ್ಯಾಜ್ಯ ಸುರಿಯಲಾಗಿದೆ. ಬೇರೆ ಬೇರೆ ಕಾರಣಗಳಿಂದ ಈ ತ್ಯಾಜ್ಯ ನದಿಯ ಒಡಲು ಸೇರಿದೆ. ಇದರ ಕಾರಣಕರ್ತರು ನಾವೇ. ಮನುಷ್ಯನಿಗೆ ಜೀವಜಲ ನೀಡುವ ನದಿಗಳೇ ಮಲಿನವಾದರೆ ಆರೋಗ್ಯವೂ ಸೇರಿದಂತೆ ನದಿಯ ಪಾವಿತ್ರ್ಯತೆ ಹಾಳಾಗುತ್ತದೆ. ಹೀಗಾಗಿ ಅವುಗಳ ಪಾವಿತ್ರ್ಯ ಸಂರಕ್ಷಣೆ ನಮ್ಮ ಮೇಲಿದೆ.
ಹೀಗಾಗಿ ನದಿ ಸ್ವಚ್ಛತೆ ಮಾಡುವ ಮೂಲಕ ಜನರಿಗೆ ನದಿಯ ಬಗ್ಗೆ ಅರಿವು ಸ್ವಚ್ಛತೆಯ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮ ಪ್ರಮುಖ ಉದ್ದೇಶವಾಗಿದೆ ಎಂದರು.
ಕಳೆದ ವರ್ಷ ನದಿ ಸ್ವಚ್ಛತೆಯನ್ನು ಆರಂಭಿಸಿದೆವು. ರಾಜ್ಯಾದ್ಯಂತ 7 ನದಿಗಳ ಸ್ವಚ್ಛತಾ ಕಾರ್ಯವನ್ನು ಯುವ ಬ್ರಿಗೇಡ್ ನಡೆಸಿದೆ. ಬಳಿಕ ಕಾವೇರಿ, ಬೀಮೆ, ಶ್ರೀ ಕ್ಷೇತ್ರ ಕಟೀಲಿನ ಪುಣ್ಯ ನದಿ ನಂದಿನಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿಯಲ್ಲಿ ಸ್ವಚ್ಛತಾ ಸೇವೆ ನೆರವೇರಿಸಿದ್ದೇವೆ. ಆರಂಭದಲ್ಲಿ ನಾವು ರಾಜ್ಯದಲ್ಲಿನ ಕಲ್ಯಾಣಿಗಳ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಿದ್ದೆವು.ಈ ಕಾರಣದಿಂದ ನಾವು ಸುಮಾರು 125 ಕಲ್ಯಾಣಿಗಳನ್ನು ಸ್ವಚ್ಛ ಮಾಡಿದ್ದೆವು.ಕಳೆದ ವರ್ಷದಿಂದ ನದಿ ಸ್ವಚ್ಛತೆಗೆ ಗಮನ ಹರಿಸಿದೆವು ಎಂದು ಸೂಲಿಬೆಲೆ ಹೇಳಿದರು.
ತರುಣರನ್ನು ಸಮಾಜಮುಖಿ ಕೆಲಸಗಳಿಗೆ ಆಕರ್ಷಿತರಾಗುವಂತೆ ಮಾಡುವುದು ಯುವ ಬ್ರಿಗೇಡ್‍ನ ಸಂಕಲ್ಪವಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯಾದ್ಯಂತ ಕಲ್ಯಾಣಿ ಸ್ವಚ್ಛತೆ , ನದಿ ಸ್ವಚ್ಛತೆ, ಪರಿಸರಜಾಗೃತಿ, ಜಲಸಂಪತ್ತಿನ ಜಾಗೃತಿ, ರೈತರ ಬಗ್ಗೆ ಗೌರವ ಹೆಚ್ಚಿಸುವ ಕಾರ್ಯ, ಸೈನಿಕರ ಬಗ್ಗೆ ಗೌರವ ಅಭಿವೃದ್ಧಿಗೊಳಿಸುವ ಕಾರ್ಯ, ಸಮಾಜದಲ್ಲಿ ಸದ್ಭಾವನೆ ಹೆಚ್ಚಿಸುವ ಕಾರ್ಯ, ತರುಣರಿಗೆ ಸ್ವಾವಲಂಬಿ, ಮಾನವೀಯತೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಕಾರ್ಯ ಮಾಡಿದ್ದೇವೆ.ಈ ಮೂಲಕ ತಾರುಣ್ಯವನ್ನು ಸಮಾಜಕ್ಕೆ ಬೆಸೆಯುವ ಕಾಯಕ ಮಾಡಿದ್ದೇವೆ. ಯುವ ಬ್ರಿಗೇಡ್ ವತಿಯಿಂದ ಪರಿಸರ ಸಂರಕ್ಷಣೆಯ ಅನೇಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸುತ್ತಲೇ ಬಂದಿದೆ.ಗಿಡಗಳನ್ನು ನೆಟ್ಟು ಪೋಷಿಸುವ ಪೃಥ್ವಿಯೋಗ, ಜಲ ಸಂರಕ್ಷಣೆಗಾಗಿ ನದಿ ಮತ್ತು ಕಲ್ಯಾಣಿ ಸ್ವಚ್ಛತೆ ಮಾಡಿದ್ದೇವೆ.ಇದು ಜನತೆಗೆ ಶುಚಿತ್ವದ ಕುರಿತು ಕಾಳಿಜಿ ಅಧಿಕವಾಗಲು ದಾರಿದೀಪವಾಗಲಿ ಎನ್ನುವುದು ನಮ್ಮ ಆಶಯ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.