ನಾಗರಪಂಚಮಿ ನಾಡಿಗೆ ದೊಡ್ಡದು. ಈ ಹಬ್ಬದ ಮೂಲಕ ನಾಡಿನಲ್ಲಿ ಹಬ್ಬಗಳು ಆರಂಭವಾಗುತ್ತದೆ. ಹಿಂದೂಗಳಿಗೆ ನಾಗರಪಂಚಮಿ ಅತ್ಯಂತ ಶ್ರೇಷ್ಟ ಹಾಗೂ ಸಂಭ್ರಮದ ಹಬ್ಬ. ಈ ಬಾರಿ ಕೊರೋನಾ ಈ ಹಬ್ಬವನ್ನು ಸಣ್ಣದು ಮಾಡಿದೆ. ಮನೆ ಮನೆಗಳಲ್ಲೇ ಆಚರಿಸುವಂತೆ ಮಾಡಿದೆ. ಆದರೆ ಸಡಗರಕ್ಕೆ ಕೊರತೆಯಾಗಲಿಲ್ಲ.
ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಅಂದರೆ ಪಂಚಮಿಯಂದು ಆಚರಿಸಲ್ಪಡುವ ನಾಗರಪಂಚಮಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ನಾಗರ ಪಂಚಮಿ ಹಬ್ಬಕ್ಕೆ ಕರ್ನಾಟಕದಲ್ಲಿ ಅದರಲ್ಲೂ ತುಳುನಾಡಿನಲ್ಲಿ ವಿಶೇಷ ಸ್ಥಾನವಿದೆ. ಈ ದಿನ ನಾಗನಿಗೆ ಹಾಲೆರೆದು, ಪೂಜಿಸಲಾಗುತ್ತದೆ. ಪುರಾಣ ಕತೆಯೊಂದರ ಪ್ರಕಾರ ಹಾವು ಕಚ್ಚಿ ಮಡಿದ ತನ್ನ ಸಹೋದರನನ್ನು ಸಹೋದರಿಯೊಬ್ಬಳು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಾಗಿತ್ತು. ಹಾವನ್ನು ಭಕ್ತಿಭಾವದಿಂದ ಪೂಜಿಸಿ ತನ್ನ ಅಣ್ಣನನ್ನು ತಂಗಿ ಬದುಕಿಸಿಕೊಂಡ ದಿನವಾಗಿದ್ದರಿಂದ ಈ ದಿನವನ್ನು ಭ್ರಾತೃತ್ವದ ಸಂಕೇತವಾಗಿಯೂ ಆಚರಿಸಲಾಗುತ್ತದೆ.
ನಾಗರ ಪಂಚಮಿ ಆರಾಧನೆ ಹಿನ್ನೆಲೆ, ವಿಶೇಷ ಹಾಗೂ ಪೂಜಾ ಕ್ರಮದ ಮಾಹಿತಿ ಜನಮೇಜಯ ಎಂಬ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಹಾವು ಕಾರಣ ಎಂದು ತಿಳಿದು ಭೂಲೋಕದಲ್ಲಿರುವ ಸರ್ಪಸಂಕುಲವನ್ನೆಲ್ಲ ನಾಶ ಮಾಡುವ ಶಪಥ ಮಾಡಿ, ಸರ್ಪಯಜ್ಞ ಮಾಡಲು ಹೊರಡುತ್ತಾನೆ. ಆದರೆ ಪ್ರಾಣಿ ಹಿಂಸೆ ಮಹಾಪಾಪ ಎಂಬುದನ್ನು ಸಂತರೊಬ್ಬರ ಹಿತವಚನದಿಂದ ಅರಿತ ಜನಮೇಜಯ ಸರ್ಪಯಜ್ಞವನ್ನು ಹಿಂದೆಗೆದುಕೊಳ್ಳುತ್ತಾನೆ. ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಆದ್ದರಿಂದ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಎಂಬ ಪ್ರತೀತಿಯೂ ಇದೆ.
ಶ್ರೀಕೃಷ್ಣನ ನೆನಪು ನಾಗರ ಪಂಚಮಿಗೂ ಭಗವಾನ್ ಶ್ರೀಕೃಷ್ಣನಿಗೂ ಸಂಬಂಧವಿದೆ. ಪುರಾಣ ಕತೆಯೊಂದರ ಪ್ರಕಾರ ಬಾಲ ಕೃಷ್ಣ ಯಮುನಾ ನದಿ ತೀರದಲ್ಲಿ ಆಟವಾಡುತ್ತಿದ್ದಾಗ ನದಿಯಲ್ಲಿ ಜಾರಿ ಬೀಳುತ್ತಾನೆ. ಕೃಷ್ಣ ನದಿಗೆ ಬಿದ್ದ ಸಂದರ್ಭದಲ್ಲಿ ಕಾಳಿಯಾ ಎಂಬ ಹಾವೊಂದು ಆಅತನ ಮೇಲೆ ದಾಳಿ ನಡೆಸುತ್ತದೆ. ಆದರೆ ದೈವತ್ವದ ಸ್ವರೂಪವಾಗಿದ್ದ ಶ್ರೀಕೃಷ್ಣ ಕಾಳಿಯಾನನ್ನು ಮಣಿಸುತ್ತಾನೆ. ಈತ ಸಾಮಾನ್ಯ ಮಗುವಲ್ಲ ಎಂಬುದನ್ನು ಅರಿತ ಕಾಳಿಯ ಹಾವು ತನ್ನನ್ನು ಬಿಟ್ಟುಬಿಡುವಂತೆ ಕೃಷ್ಣನಲ್ಲಿ ಬೇಡುತ್ತದೆ. ಆಗ ಜನರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ವಚನ ಪಡೆದು, ಶ್ರೀಕೃಷ್ಣ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗೆ ಕೃಷ್ಣನು ಕಾಳಿಯಾ ಹಾವನ್ನು ಸೋಲಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಆ ದಿನದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.
ಹೀಗೆ ಎರಡು-ಮೂರು ಪುರಾಣ ಹಿನ್ನೆಲೆ ಇರುವ ನಾಗರಪಂಚಮಿ ಹಿಂದೂ ಹಬ್ಬಗಳ ಆರಂಭ. ಶ್ರಾವಣ ಮಾಸದ ಹಬ್ಬಗಳ ಸಾಲು ಆರಂಭವಾಗುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಆರಂಭವಾಗುತ್ತವೆ.