ನೀರಿನ ಬರಕ್ಕೆ ರಬ್ಬರ್ ತೋಟ ಕಾರಣವೇ?

May 30, 2019
11:00 AM

ಈ ಬೇಸಿಗೆ ನೀರಿಲ್ಲದೆ ಎಲ್ಲರನ್ನೂ ಕಂಗಾಲಾಗಿಸಿಬಿಟ್ಟಿದೆ. ಕರಾವಳಿಯಲ್ಲಿ ಒಂದೆರಡಾದರೂ ಮಳೆ ಬರಲು ಮೇ ತಿಂಗಳ 23 ನೇ ತಾರೀಕು ಬರಬೇಕಾಯಿತು. ಮಾರ್ಚ್ ಕೊನೆಗೆ ಅಥವ ವಿಷುವಿನ ಸಮಯ ಅಂದರೆ ಏಪ್ರಿಲ್ ಹತ್ತರಿಂದ ನಂತರ ಮಳೆ ಬರುವ ಕ್ರಮ ಸಾಮಾನ್ಯವಾಗಿರುತ್ತದೆ ಎಂಬ ನೆನಪಿನ ಭಂಡಾರವನ್ನು ಹಿರಿಯ ಕೃಷಿಕರು ನಮ್ಮ ಮುಂದೆ ಬಿಚ್ಚುತ್ತಾರೆ.

ಆದರೆ ಈ ವರ್ಷ ಪಂಚಾಂಗ ಹೇಳುವ ಸಮಯದಲ್ಲಿ ಮಳೆ ಬರಲೇ ಇಲ್ಲ. ನದಿ ಬತ್ತಿತು, ತೋಡು ಬತ್ತಿತು, ಕೆರೆ, ಬಾವಿ, ಸುರಂಗಗಳೆಲ್ಲ ನೀರಿನ ಕೊರತೆಯನ್ನು ಪ್ರಸ್ತುತಪಡಿಸಲು ಆರಂಭಿಸಿಯಾಯಿತು. ಕೊಟ್ಟ ಕೊನೆಯ ಆಸೆಯಾಗಿದ್ದ ಕೊಳವೆಬಾವಿಗಳು ಕೂಡ ಕೈಕೊಟ್ಟವು. ಇಡೀ ಬೇಸಿಗೆಯಲ್ಲಿ ಮಕ್ಕಳನ್ನು ನೋಡಿದಂತೆ, ಸಾಕಿ ಸಲಹಿದಂತೆ ಇದ್ದ ಅಡಿಕೆ ಮತ್ತು ತೆಂಗಿನ ತೋಟಗಳು ಕೊನೆಯ ಒಂದೂವರೆ ತಿಂಗಳಿನಲ್ಲಿ ವ್ಯರ್ಥವಾಯಿತು. ಪಟ್ಟ ಶ್ರಮಗಳೆಲ್ಲ ನಿರರ್ಥಕವಾದವು. ಸಹಜವಾಗಿ ಕೃಷಿಕರು ವೇದನೆ ಪಡುತ್ತಾರೆ. ಅಸಹಾಯಕರಾಗಿ ಮಾತನಾಡುತ್ತಾರೆ. ಅವರಲ್ಲಿ ಇವರಲ್ಲಿ ಮಳೆ ತಡವಾದ ಬಗ್ಗೆ, ನೀರಿನ ಲಭ್ಯತೆಗಳ ಬಗ್ಗೆ ಮಾತಿಗಿಳಿಯುತ್ತಾರೆ. ನಿಟ್ಟುಸಿರುಬಿಡುತ್ತಾರೆ. ಇಂತಹ ಅಸಹಾಯಕ ಸನ್ನಿವೇಶದಲ್ಲಿ ಕೆಲವೊಂದು ಕಾರಣಗಳು ಹುಟ್ಟಿಕೊಂಡು ಸಂದೇಹದಿಂದ ನೋಡುವ ಮಾನಸಿಕತೆ ಬೆಳೆಯುವುದು ಸಹಜ.

ಇಲ್ಲಿಯೂ ಆದುದು ಅದೇ. ಅಡಿಕೆ ತೋಟ ನೀರಿನ ಅಭಾವದಿಂದ ಬಾಡಿ ಬಸವಳಿದು ತುದಿ ರಟ್ಟಿಸಿಕೊಂಡು ಇದ್ದಾಗ ಯಾರಿಗೋ ನೀರಿನ ಅಭಾವಕ್ಕೆ ರಬ್ಬರ್ ಕೃಷಿಯೇ ಕಾರಣವಾಗಿರಬಹುದೆ ಎಂಬ ಅನುಮಾನ ಕಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾತುಗಳು ಕೇಳಿಬಂದವು. ಕೆಲವರು ಬಲವಾಗಿ ನಿರಾಕರಿಸಿದರೆ ಇನ್ನು ಹಲವರು ರಬ್ಬರ್ ಕೃಷಿಯ ಮೇಲೆ ಒಂದಷ್ಟು ಸಂಶಯಪಟ್ಟರು. ಸಾಕಷ್ಟು ಮಂದಿ ಹಿರಿಯರು ಕೂಡ ರಬ್ಬರ್ ಮರಗಳ ಮೇಲೆಯೇ ಸಂಶಯಪಡುತ್ತಾರೆ. ಇದೊಂದು ಬಂದ ಮೇಲೆಯೇ ನಮ್ಮ ಊರಿನ ನೀರೊಸರು ಕಡಿಮೆಯಾದದ್ದು ಎಂಬುದು ಅವರ ವಾದ. ಮೊನ್ನೆ ಬೇಳದ ಸಾಯಿಮಂದಿರದಲ್ಲಿ ಮದುವೆಗೆ ಹೋಗಿದ್ದೆ. ಅಲ್ಲಿಯ ವಾತಾವರಣವೆಂದರೆ ಅಡಿಕೆ ಪತ್ತಾಯಕ್ಕೆ ಹೊಕ್ಕುಕುಳಿತ ಸ್ಥಿತಿ. ಅಲ್ಲಿ ನೀರಿನ ಕೊರತೆ, ನೀರೊರತೆ ಭೂಮಿಯಲ್ಲಿ ಕಡಿಮೆಯಾದ ಬಗ್ಗೆ ಚರ್ಚೆ ಜೋರಿತ್ತು. ಅಲ್ಲಿಯೇ ಸೊಂಪಾಗಿ ಬೆಳೆದು ನಿಂತಿದ್ದ ರಬ್ಬರ್ ತೋಟವನ್ನು ತೋರಿಸಿ ಕೆಲವರು ಹೇಳುತ್ತಿದ್ದರು “ ನೋಡಿ ಹೇಳುವುದಕ್ಕೆ ಎದುರೇ ಉದಾಹರಣೆ ಇದೆ, ನಾವು ಗುಡ್ಡದಲ್ಲಿರುವ ಎಲ್ಲ ಮರಗಳು ಸೊಪ್ಪು ಬಾಡಿದ ಸ್ಥಿತಿಯಲ್ಲಿದ್ದರೆ ರಬ್ಬರ್ ಮರಗಳು ಹಚ್ಚ ಹಸಿರಾಗಿ ಗಾಳಿಗೆ ತೂಗಿ ತೊನೆಯುತ್ತಿದೆ. ಈ ಸಮಯದಲ್ಲಿಯೂ ಅದು ಹಾಲಿಳಿಸಬೇಕೆಂದಾದರೆ ಭೂಮಿಯೊಳಗಿನ ಅದೆಷ್ಟು ನೀರನ್ನು ಅದು ಹೀರಿರಬೇಡ. ಇದ್ದ ನೀರೆಲ್ಲ ಅದರ ಬೇರು ಹೀರಿದ ಮೇಲೆ ಮತ್ತೆ ಬೇರೆಡೆಗೆ ಹೋಗಲು ನೀರಾದರೂ ಎಲ್ಲಿ” ಎಂದು. ಇದು ಅಧ್ಯಯನಯೋಗ್ಯ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ.
ಇನ್ನೊಂದು ತರ್ಕವಿದೆ. ಅದರ ಪ್ರಕಾರ ಹಿಂದೆ ರಬ್ಬರ್ ಕಾಲಿಡುವ ಮೊದಲು ನೀರಿತ್ತು ಹೌದು. ಆದರೆ ಅದರ ನಂತರ ನೀರಿನ ಬಳಕೆ ಎಷ್ಟು ಹೆಚ್ಚಾಯಿತು ಎಂಬುದನ್ನು ನಾವು ವಿಮರ್ಶೆ ಮಾಡಿದ್ದಿದೆಯೇ? ಅದೆಷ್ಟು ಕೃಷಿ ವಿಸ್ತರಣೆ ಆಯಿತು, ಕೈಗಾರಿಕೆಗಳು ಬೆಳೆದವು, ಜನಸಂಖ್ಯೆ ಹೆಚ್ಚಾಯಿತು, ನಗರಗಳು ಬೆಳೆದವು. ಹೀಗೆಲ್ಲ ನೀರಿನ ಬಳಕೆಯೂ ಹೆಚ್ಚಾಯಿತು, ಅಂತರ್ಜಲಕ್ಕೆ ಕನ್ನವನ್ನೂ ಕೊರೆದೆವು. ಎಲ್ಲವೂ ಸೇರಿ ನೀರೊರತೆ ಕಡಿಮೆಯಾಯಿತು. ಹೀಗೆನ್ನುವವರು ರಬ್ಬರ್ ತೋಟ ಮಾಡಿದ ನಂತರ ನಮ್ಮ ಸುರಂಗದಲ್ಲಿ, ಬಾವಿಯಲ್ಲಿ ನೀರೊಸರು ಹೆಚ್ಚಿದೆ. ರಬ್ಬರ್ ಗುಡ್ದದಲ್ಲಿ ಬಿದ್ದ ಮಳೆನೀರು ಕಣಿಯಾಗಿ ಹರಿಯದೆ ಅಲ್ಲಿಯೇ ಇಂಗುತ್ತದೆ. ಆದ್ದರಿಂದ ಅಂತರ್ಜಲಕ್ಕೆ ಪೂರಕ ರಬ್ಬರ್ ತೋಟ ಎಂಬವರು ಇದ್ದಾರೆ.

ಯಾವುದಿದ್ದರೂ ನಾವು ಹೊಸ ಬೆಳೆಗಳಿಗೆ ಕಾಲಿಡುವ ಮೊದಲು ಅದು ನಮ್ಮ ನೆಲದ ಸತ್ವಕ್ಕೆ ಪೂರಕವೇ ವಿನಾಶಕಾರಿಯೇ ಎಂಬುದನ್ನು ನಾವು ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಅಕೇಶಿಯಾದ ಕಾಡನ್ನು ಸರಕಾರವೇ ಬೆಳೆಸಿತು. ಮರ ಬೆಳೆದು ನಿಂತಾಗ ಅದು ಪರಿಸರಕ್ಕೆ ಪೂರಕವಲ್ಲ ಎಂಬ ಅಂಶ ತಿಳಿದು ಅದರ ನಾಶಕ್ಕೆ ಮುಂದಾಗಬೇಕಾಯಿತು. ಆದರೆ ಅದು ನಾಶವಾಗದಷ್ಟು ವಿಸ್ತೃತವಾಗಿ ಬೆಳೆದು ಪಸರಿಸಿದ್ದು ನಿಜವಾಗಿಯೂ ಅದು ಪರಿಸರಕ್ಕೆ ಪೂರಕವಲ್ಲದಿದ್ದರೆ ಅದನ್ನು ಅಳಿಸುವುದು ಕೂಡ ದುಸ್ತರವಾಗಲಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

ಇದನ್ನೂ ಓದಿ

ಮಳೆ ಹಾನಿ ಬೆಳೆನಷ್ಟ ಪರಿಹಾರ ಹೆಚ್ಚಿಸುವವಂತೆ ರೈತರ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಒತ್ತಾಯ
September 18, 2025
9:06 PM
by: The Rural Mirror ಸುದ್ದಿಜಾಲ
ಅಡಿಕೆ ಕೊಳೆರೋಗ | ಇಲಾಖೆಗಳ ಮಾಹಿತಿ ತಲುಪಿದ ಕೃಷಿಕರ ಸಂಖ್ಯೆ ನೋಡಿದರೇ ಅಚ್ಚರಿ…!
September 18, 2025
6:59 AM
by: ದ ರೂರಲ್ ಮಿರರ್.ಕಾಂ
ರಾಜ್ಯಕ್ಕೆ ಬಾಕಿ ಇರುವ ಯೂರಿಯಾ ತ್ವರಿತ ಬಿಡುಗಡೆಗೆ ಒತ್ತಾಯ
September 17, 2025
8:13 PM
by: The Rural Mirror ಸುದ್ದಿಜಾಲ
ಕಲಬುರ್ಗಿಯಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಿಸಿದ ಮುಖ್ಯಮಂತ್ರಿ | ಸಮರ್ಪಕ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ
September 17, 2025
8:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group