ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂದಾರು- ಮೊಗ್ರು ಗ್ರಾಮದ ಪ್ರವಾಹ ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ಮಹತ್ವದ ಯೋಜನೆಯನ್ನು ಶ್ರೀರಾಮಚಂದ್ರಾಪುರ ಮಠ ಪ್ರಕಟಿಸಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು- ಮೊಗ್ರು ಗ್ರಾಮಗಳ ಸಂಪರ್ಕ ಸೇತುವಾಗಿದ್ದ ತೂಗುಸೇತುವೆ ಪ್ರವಾಹಕ್ಕೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಈ ಗ್ರಾಮಗಳ ಹತ್ತಾರು ಮಕ್ಕಳು ಶಾಲೆಗಳಿಗೆ ತೆರಳಲು ಸಾಧ್ಯವಾಗದೇ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿತ್ತು. ಸಂತ್ರಸ್ತ ಮಕ್ಕಳ ಅಸಹಾಯಕ ಸ್ಥಿತಿಗೆ ಸ್ಪಂದಿಸಿದ ಶ್ರೀಮಠ ತಕ್ಷಣದಿಂದಲೇ ಉಭಯ ಗ್ರಾಮಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ.
ನೇತ್ರಾವತಿ ನದಿಗೆ ಮುಗೇರಡ್ಕ ಎಂಬಲ್ಲಿ ಅಡ್ಡಲಾಗಿ ಕಟ್ಟಿದ್ದ ತೂಗುಸೇತುವೆ ಈ ತಿಂಗಳ 8 ರಂದು ಶ್ರೀಮಠದ ಅಂಗಸಂಸ್ಥೆಯಾದ ಉರುವಾಲಿನ ಶ್ರೀಭಾರತೀ ವಿದ್ಯಾಸಂಸ್ಥೆಯಲ್ಲಿ ಈ ಗ್ರಾಮಗಳ ಮಕ್ಕಳಿಗೆ ಉಚಿತವಾಗಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್ ಪ್ರಕಟಿಸಿದ್ದಾರೆ.
ಈಗಾಗಲೇ ಬಾಗಲಕೋಟೆ ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೀಡಾಗಿರುವ ಶಿವಯೋಗ ಮಂದಿರದ ಗೋವುಗಳಿಗೆ ಒಂದು ಲೋಡ್ ಮೇವನ್ನು ಶ್ರೀಮಠದ ವತಿಯಿಂದ ವಿತರಿಸಲಾಗಿದ್ದು, ಹಾನಗಲ್ ಮಠದ ಗೋಶಾಲೆಗೆ ಒಂದು ಲೋಡ್ ಮೇವು ವಿತರಿಸಲಾಗಿದೆ. ಶಿವಯೋಗ ಮಂದಿರಕ್ಕೆ ಸಿಂಧನೂರಿನಿಂದ ಎರಡು ಲೋಡ್ ಹಾಗೂ ದಾವಣಗೆರೆಯಿಂದ ಒಂದು ಲೋಡ್ ಮೇವನ್ನು ಗೋ ಪರಿವಾರ ವತಿಯಿಂದ ವಿತರಿಸಲಾಗಿದೆ. ಶ್ರೀಮಠದ ನೂರಾರು ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶ್ರೀಮಠದ ಸೇವಾ ವಿಭಾಗದ ವತಿಯಿಂದ ಸಂತ್ರಸ್ತರಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ಪೂರೈಸಲಾಗಿದೆ. ಈಗಾಗಲೇ ಶ್ರೀಮಠದ ಎಲ್ಲ ಅಂಗಸಂಸ್ಥೆಗಳಲ್ಲಿ ನೆರೆ ಸಂತ್ರಸ್ತರಿಗೆ ಊಟೋಪಚಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.