ಪೊಲಿಟಿಕಲ್ ರೌಂಡ್ ಅಪ್
* ಸ್ಪೆಷಲ್ ಕರೆಸ್ಪಾಂಡೆಂಟ್
ಸುಳ್ಯ: ಕಳೆದ ಕೆಲವು ತಿಂಗಳಿನಿಂದ ಎಲ್ಲೆಡೆ ಚುನಾವಣೆಯದ್ದೇ ಭರಾಟೆ. ಸುಳ್ಯದಲ್ಲಿ ಲೋಕಸಭೆ, ನಗರ ಪಂಚಾಯತ್ ಹೀಗೆ ಸಾಲು ಸಾಲು ಚುನಾವಣೆಯಿಂದ ಕಾವು ಸ್ವಲ್ಪ ಹೆಚ್ಚೇ ಇತ್ತು. ಚುನಾವಣಾ ಗುಂಗಿನಿಂದ ಹೊರ ಬಂದು ಪಕ್ಷಗಳು ರಿಲಾಕ್ಸ್ ಮೂಡ್ ನತ್ತ ಜಾರುತಿದ್ದ ದಿನಗಳು. ಇನ್ನೇನು ಪೊಲಿಟಿಕಲ್ ಸುದ್ದಿಗಳಿಗೆ ಬ್ರೇಕ್ ಬೀಳುತ್ತೆ ಅನ್ನುವಷ್ಟರಲ್ಲಿ ಕಳೆದ ವಾರ ಬಿಗ್ ಬ್ರೇಕಿಂಗ್ ಆಗಿ ಹೊರ ಬಂದ ಸುದ್ದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಿ ಎನ್.ಜಯಪ್ರಕಾಶ್ ರೈ ಕೆಳಗಿಳಿದಾಗ ಸುಳ್ಯ ರಾಜಕೀಯ ವಲಯದಲ್ಲಿ ಅದು ದೊಡ್ಡ ಸಂಚಲನವನ್ನೇ ಸೃಷ್ಠಿಸಿತು. ಆ ಸಂಚಲನದ ಅಲೆ, ಚರ್ಚೆ ಇನ್ನೂ ನಿಂತಿಲ್ಲ. ನಾಯಕನೇ ಅನಿರೀಕ್ಷಿತವಾಗಿ ರಾಜಿನಾಮೆ ಕೊಟ್ಟು ಹೊರ ನಡೆದಿರುವುದು ಸುಳ್ಯದ ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಈ ಬೆಳವಣಿಗೆಯ ಬೆರಗಿನಿಂದ ಹೊರ ಬಂದಿಲ್ಲ. ಪಕ್ಷದಲ್ಲಿ ಒಂದು ರೀತಿಯ ಶೂನ್ಯತೆ ಸೃಷ್ಠಿಯಾಗಿ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ಕಾರಣ ಮೂರು ತಿಂಗಳ ಕಾಲ ಸುಳ್ಯದಲ್ಲಿ ಇರುವುದಿಲ್ಲ ಆ ಕಾರಣಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯಂತಹಾ ಎಕ್ಸಿಕ್ಯುಟಿವ್ ಹುದ್ದೆಯನ್ನು ಖಾಲಿ ಬಿಡುವುದು ಸರಿಯಲ್ಲ ಎಂಬ ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಜಯಪ್ರಕಾಶ್ ರೈ ಹೇಳಿದ್ದಾರೆ. ತಕ್ಷಣಕ್ಕೆ ಅದು ಒಂದು ಕಾರಣವಾಗಿ ಗೋಚರಿಸಿದರೂ ಪಕ್ಷದಲ್ಲಿನ ಕೆಲವು ಆಂತರಿಕ ಬೇಗುದಿ ಕೂಡ ಕಾರಣವಾಗಿದೆ ಎಂಬ ಮಾತುಗಳೂ ಕೇಳಿ ಬರುತಿದೆ. ಎರಡು ವರ್ಷದ ಹಿಂದೆ ಜಯಪ್ರಕಾಶ್ ರೈ ಅಧ್ಯಕ್ಷರಾದಾಗ ಕೆಲವು ಅಪಸ್ವರಗಳು, ವಿರೋಧಗಳು ಕೇಳಿ ಬಂದಿತ್ತು. ಬಳಿಕ ಅಪಸ್ವರ ಎತ್ತಿದ ನಾಯಕರಿಗೆ ಸ್ಥಾನಗಳನ್ನು ನೀಡಿ ಪಕ್ಷ ಅವರನ್ನು ಸಮಾಧಾನ ಪಡಿಸಿತ್ತು. ಸುಮಾರು 20 ವರುಷಗಳ ಕಾಲ ಬಿಜೆಪಿ ಯಲ್ಲಿ ಸಕ್ರೀರಾಗಿದ್ದ ಜಯಪ್ರಕಾಶ್ ರೈ ಸಂಘಟನಾ ಚತುರ ಎಂಬ ಹೆಸರು ಪಡೆದಿದ್ದರು. ಜಯಪ್ರಕಾಶ್ ರೈ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಆದಾಗಲೂ ತನ್ನ ಸಂಘಟನಾ ಚಾಕಚಕ್ಯತೆ ಮತ್ತು ಖಡಕ್ ನಿಲುವುಗಳಿಂದಲೇ ಕಾಂಗ್ರೆಸ್ ನಲ್ಲಿ ಪಕ್ಷ ಸಂಘಟನೆಗೆ ಪ್ರಯತ್ನ ನಡೆಸಿದ್ದರು. ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದರೂ ಪಕ್ಷವನ್ನು ಚುನಾವಣಾ ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಗೆಲುವಿನ ನಿರೀಕ್ಷೆಯಿದ್ದ ನಗರ ಪಂಚಾಯತ್ ಚುನಾವಣೆಯೂ ಕೈಕೊಟ್ಟಿತು. ಲೋಕಸಭೆ, ನಗರ ಪಂಚಾಯತ್ ಚುನಾವಣಾ ಫಲಿತಾಂಶ ಹೊರ ಬಂದ ಬೆನ್ನಲ್ಲೇ ಜೆಪಿ ರೈ ಅಧ್ಯಕ್ಷ ಸ್ಥಾನದಿಂದ ಇಳಿದೇ ಬಿಟ್ಟರು.
ಇದೀಗ ಚೆಂಡು ಡಿಸಿಸಿ ಅಂಗಳದಲ್ಲಿದೆ. ರಾಜಿನಾಮೆ ಅಂಗೀಕರಿಸಿ ಹೊಸ ಸಾರಥಿಯನ್ನು ನೇಮಕ ಮಾಡುತ್ತಾರಾ ಅಥವಾ ಜಯಪ್ರಕಾಶ್ ರೈಯವರನ್ನೇ ಅಧ್ಯಕ್ಷರಾಗಿ ಮುಂದುವರಿಯಲು ಸೂಚಿಸುತ್ತಾರಾ ಎಂಬುದು ಈಗ ಇರುವ ಮಿಲಿಯನ್ ಡಾಲರ್ ಪ್ರಶ್ನೆ. ಬಿಜೆಪಿ ಬಿಟ್ಟು ಜಯಪ್ರಕಾಶ್ ರೈ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದಾಗ ಅವರಿಗೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಆಂತರಿಕ ಮೂಲಗಳ ಪ್ರಕಾರ ಬ್ಲಾಕ್ ಅಧ್ಯಕ್ಷರಾಗಿ ಮುಂದುವರಿಯಲು ಜಯಪ್ರಕಾಶ್ ರೈಗೆ ಆಸಕ್ತಿ ಇಲ್ಲ. ಹಾಗಾದರೆ ಅವರು ಮತ್ತೆ ಜಿಲ್ಲಾ ಸಮಿತಿ ಪದಾಧಿಕಾರಿಯಾಗುವ ಸಾಧ್ಯತೆ ಇದೆ. ಜಯಪ್ರಕಾಶ್ ರೈ ರಾಜಿನಾಮೆ ಅಂಗೀಕಾರ ಆದರೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಸಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಸವಾಲಿನ ವಿಷಯವೇ ಸರಿ. ಹಲವು ಮಂದಿ ನಾಯಕರು ಅರ್ಹರಾಗಿದ್ದರೂ ಯಾರಿಗೆ ನೀಡುವುದು ಎಂಬ ಪ್ರಶ್ನೆ ಏಳುತ್ತದೆ. ಇಲ್ಲಿ ಅಧ್ಯಕ್ಷರ ನೇಮಕಕ್ಕೆ ಹಲವು ಸಮೀಕರಣಗಳನ್ನು ಪರಿಗಣಿಸಬೇಕಾಗುತ್ತದೆ. ಎಲ್ಲರೂ ಒಪ್ಪುವ ಎಲ್ಲರನ್ನೂ ಮುನ್ನಡೆಸುವ ನಾಯಕ ಬೇಕಾಗಿದ್ದಾರೆ ಎಂಬುದು ಕಾರ್ಯಕರ್ತರ ಒತ್ತಾಸೆ. ಪಕ್ಷ ಸಂಘಟನೆಯ ಜೊತೆಗೆ ಮುಂದೆ ಬರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾದ ಜವಾಬ್ದಾರಿಯೂ ಹೊಸ ಅಧ್ಯಕ್ಷರ ಹೆಗಲ ಮೇಲೆ ಬರಲಿದೆ. ಈ ಮಧ್ಯೆ ಅಧ್ಯಕ್ಷ ಕುರ್ಚಿಯ ಮೇಲೆ ಕಣ್ಣಿಟ್ಟು ಹಲವು ಮಂದಿ ತೆರೆ ಮರೆಯ ಪ್ರಯತ್ನ ಆರಂಭಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತಿದೆ. ಮಹಿಳಾ ಮುಖಂಡರು ಸೇರಿ ಹತ್ತಕ್ಕೂ ಹೆಚ್ಷು ಹೆಸರುಗಳು ಆಧ್ಯಕ್ಷ ಗಾದಿ ಸುತ್ತ ಗಿರಕಿ ಹೊಡೆಯುತಿದೆ.
ಬಿಜೆಪಿಗೂ ಸದ್ಯದಲ್ಲೇ ಹೊಸ ನಾಯಕ..?
ಕಾಂಗ್ರೆಸ್ ನಲ್ಲಿ ರಾಜಿನಾಮೆಯಿಂದ ಹೊಸ ನಾಯಕ ಬರುವ ಸಾಧ್ಯತೆ ಇದ್ದರೆ ಮಂಡಲ ಅಧ್ಯಕ್ಷರ ಅವಧಿ ಮುಗಿಯುವ ಕಾರಣ ಬಿಜೆಪಿಗೂ ಕೆಲವೇ ತಿಂಗಳಲ್ಲಿ ಹೊಸ ನಾಯಕ ಬರಲಿದ್ದಾರೆ. ಬಿಜೆಪಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಅವಧಿ ಮುಗಿಯುವ ಹಿನ್ನಲೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯತ್ತ ಬಿಜೆಪಿ ಚಿತ್ತ ಹರಿಸಲಿದೆ. ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವಾರು ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಸದ್ಯದಲ್ಲಿಯೇ ನಡೆಯಲಿದೆ. ಸುಳ್ಯದಲ್ಲಿ ಬಿಜೆಪಿ ಅಧ್ಯಕ್ಷರ ಬಗ್ಗೆ ಸದ್ಯದ ಮಟ್ಟಿಗೆ ಯಾವುದೇ ಚರ್ಚೆಗಳು ಆರಂಭವಾಗಿಲ್ಲ. ವೆಂಕಟ್ ವಳಲಂಬೆ ಮಂಡಲ ಸಮಿತಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಎರಡನೇ ಅವಧಿಗೆ ಅವರು ಮುಂದುವರಿಯುತ್ತಾರಾ ಅಥವಾ ಹೊಸ ಅಧ್ಯಕ್ಷರು ಬರುತ್ತಾರಾ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆಗಳು ಆರಂಭವಾಗಲಿದೆ. ಸದ್ಯ ಗೆದ್ದು ಅಧಿಕಾರ ಪಡೆದಿರುವ ನಗರ ಪಂಚಾಯತ್ ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಬಗ್ಗೆಯಷ್ಟೆ ಬಿಜೆಪಿಯಲ್ಲಿ ಚರ್ಚೆ ನಡೆಯುತಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement