ನಾಲ್ಕು ದಶಕದ ಹಿಂದಿನ ಮಳೆಗಾಲದ ದಿನ. ಆಟಿ ತಿಂಗಳು. ಎಡೆಬಿಡದೆ ಹತ್ತು ದಿವಸ ಹನಿ ಕಡಿಯದ ಮಳೆ. ತೋಡು, ಹಳ್ಳಗಳೆಲ್ಲಾ ಭರ್ತಿ. ಹರಿಯುವ ಬಳುಕು ಬಾಗುಗಳು ನೋಡಲು ಖುಷಿ. ಹರಿವಿನ ವೇಗ, ಮನೋವೇಗಕ್ಕಿಂತಲೂ ಅಧಿಕ! ಸುರುಳಿಯಾಗಿ, ಕಾರಂಜಿಯಾಗಿ, ಕಲ್ಲುಬಂಡೆಗಳಿಗೆ ಢೀ ಕೊಡುತ್ತಾ, ಸದ್ದುಮಾಡುತ್ತಾ ನದಿಮುಖವಾಗಿ ಹರಿಯುವ ಕ್ಷಣಗಳು ಎದೆಬಡಿತವನ್ನು ಹೆಚ್ಚು ಮಾಡುತ್ತಿದ್ದುವು.
ಪಯಸ್ವಿನಿ ನದಿ. ಕಿರಿದಾದ ನದಿಪಾತ್ರ. ಜೋರಾಗಿ ಎರಡು ದಿವಸ ಮಳೆ ಬಂದರೆ ಸಾಕು, ಕೆಂಪು ನೀರಿನ ಹರಿತ. ಹತ್ತು ದಿವಸ ಮಳೆ ಬಂದರೆ ಹೇಗಿರಬೇಡ? ಮನೆಯೆದುರಿನ ಗದ್ದೆಗಳೆಲ್ಲಾ ಜಲಮಯ. ಪಯಸ್ವಿನಿ ತನ್ನ ಒಡಲಲ್ಲಿ ಮಳೆನೀರನ್ನು ತುಂಬಿಕೊಳ್ಳಲು ಅಸಮರ್ಥಳಾಗಿ ಸಿಕ್ಕಸಿಕ್ಕಲ್ಲಿ ಹರಿದಳು. ಗುಡಿಸಲುಗಳನ್ನು ಸೆಳೆದಳು. ಜೋಪಡಿಗಳನ್ನು ಎಳೆದಳು. ತನ್ನ ಹರಿವಿನ ವೇಗಕ್ಕೆ ಯಾವುದೆಲ್ಲಾ ಸಿಗುತ್ತದೋ ಅವನ್ನೆಲ್ಲಾ ಸೆಳೆಯುತ್ತಾ ಹೋದಳು. ಅವಳಿಗದು ಅನಿವಾರ್ಯ. ಕಾಲನ ಕರೆ.
ಬೆಳ್ಳಂಬೆಳಿಗ್ಗೆ ಐದರ ಸಮಯದಲ್ಲಿ ಪಯಸ್ವಿನಿ ಚಂಡಿಕೆಯಾದ ಹೊತ್ತು. ಊರಿಗೆ ಊರೇ ಕಣ್ಣು ಬಿಡುವಾಗ ‘ತ್ರಿಮೂರ್ತಿಗಳಿಗೆ ಗೋಚರವಾದ ಹಾಗೆ’ ಸುತ್ತೆಲ್ಲಾ ಜಲಮಯ. ನದಿ ಯಾವುದು, ಗದ್ದೆ ಯಾವುದು ಎಂದು ಅರಿಯದ ಸ್ಥಿತಿ. ನದಿಯ ತೀರದಲ್ಲಿ ಮನೆಮಾಡಿಕೊಂಡವರೆಲ್ಲಾ ಶ್ರೀಮಂತರಲ್ಲ. ಮುಳಿಹುಳ್ಳಿನ ಮಾಡು. ಮಣ್ಣಿನ ಗೋಡೆ. ಸಲಕೆ ಹಾಸಿದ ಅಟ್ಟ. ಪಯಸ್ವಿನಿ ಅಂಗಳವಲ್ಲ, ಜಗಲಿಯೇರಿ, ಅಡುಗೆಮನೆಯೊಳಗೆ ಹೊಕ್ಕಳು. ಹೊಟ್ಟೆಗಿಳಿಸಲು ಮಾಡಿಟ್ಟ ತಿಂಡಿಗಳನ್ನೆಲ್ಲಾ ಆಪೋಶನಗೈದಳು.
ಉಳಿದಿರುವುದು ಒಂದೇ ದಾರಿ – ಅಟ್ಟವೇರುವುದು. ಗೋಡೆಯನ್ನು ಕೊಚ್ಚಿಕೊಂಡು ಹೋದರೆ ಅಟ್ಟವೆಲ್ಲಿ ಉಳಿದೀತು? ಭಂಡ ಧೈರ್ಯದಿಂದ ಅಟ್ಟದಲ್ಲಿ ವಾಸ. ಈಜು ಬಲ್ಲವರು ಬದುಕಿಕೊಂಡರು. ಬಹುಶಃ ನಮ್ಮ ಮನೆ ಹೊರತು ಪಡಿಸಿ ಮಿಕ್ಕೆಲ್ಲಾ ಮನೆಯವರು ಎತ್ತರದ ದಡ ಸೇರಿ ಸುರಕ್ಷಿತರಾಗಿ, ನಮ್ಮ ಮನೆಯತ್ತ (ಪೆರಾಜೆ) ಪೇಚು ಮೋರೆ ಹಾಕಿ ನೋಡುತ್ತಿದ್ದರು.
‘ಒಂದು ಕುಟುಂಬವನ್ನಾದರೂ ಉಳಿಸೋಣ’ ಎನ್ನುತ್ತಾ ನೆರೆಕರೆಯ ಹೊಂತಕಾರಿಗಳು ಬಿದಿರನ್ನು ಒಂದಕ್ಕೊಂದು ಸೇರಿಸಿ ಮಾಡಿದ ತೆಪ್ಪವನ್ನು ಸಾಹಸಪಟ್ಟು ತರಲು ಪ್ರಯತ್ನಿಸುತ್ತಿದ್ದರು. ಹೇಗೋ ಅದರ ಮೇಲೆ ಕುಳಿತು ಆಚೆ ದಡ ಸೇರಿಸಿದಾಗ ಪಯಸ್ವಿನಿಗೆ ದೊಡ್ಡ ನಮಸ್ಕಾರ. ಐದು ಮಂದಿಯ ಜೀವ ಉಳಿಸಿದ ಕೃತಾರ್ಥತೆಯೊಂದಿಗೆ ‘ಮಹಾನೆರೆ’ಯ ಬಗ್ಗೆ ವಿವಿಧ ಕಲ್ಪನೆಗಳಲ್ಲಿ ಮಾತನಾಡಿದ ಮಂದಿಯ ಮಾತುಗಳು ಮರೆತಿಲ್ಲ.
ನಂತರದ ದಿವಸಗಳಲ್ಲಿ ಇಂತಹ ನೆರೆ ಬಂದಿಲ್ಲ. ಮಳೆಯ ಪ್ರಮಾಣ ಹೆಚ್ಚಿದೆ. ಹತ್ತಲ್ಲ, ತಿಂಗಳುಗಟ್ಟಲೆ ಮಳೆ ಬಂದರೂ ಹೊಳೆ ತುಂಬಿಲ್ಲ! ಮರದ ದೊಡ್ಡ ದೊಡ್ಡ ದಿಮ್ಮಿಗಳು ನೀರಿನಲ್ಲಿ ತೇಲಿ ಹೋಗಿರುವುದನ್ನು ನೋಡಿಲ್ಲ. ಸೇತುವೆಯಲ್ಲಿ ನಿಂತು ತೇಲಿ ಬರುವ ತೆಂಗಿನಕಾಯಿಯನ್ನು ಹಿಡಿಯಲು ಸಾಹಸ ಪಡುವ ಯುವಕರನ್ನು ಕಂಡಿಲ್ಲ.
ನದಿ ಪಾತ್ರ ವಿಸ್ತಾರವಾಗಿದೆ. ನದಿ ತೀರದ ಮರಗಳು ಕೊಡಲಿಗೆ ಆಹುತಿಯಾಗಿವೆ. ಮಣ್ಣನ್ನು ಹಿಡಿದಿಟ್ಟುಕೊಳ್ಳುವ ವನರಾಜಿಯ ಜೀವನರ ತುಂಡಾಗಿದೆ. ಅವ್ಯಾಹತವಾಗಿ ಮರಳು ಉಳ್ಳವರ ಪಾಲಾಗುತ್ತಾ ಬಂತು. ಈಗಂತೂ ದಂಧೆಯ ರೂಪ ಪಡೆದಿದೆ. ಅಲ್ಲಲ್ಲಿ ಅಣೆಕಟ್ಟುಗಳ ನಿರ್ಮಾಣ. ನದಿತೀರದುದ್ದಕ್ಕೂ ನೀರೆತ್ತುವ ಪಂಪುಗಳ ಸದ್ದು. ಕೃಷಿ ವಿಸ್ತಾರ…ಹೀಗೆ ನದಿ ವಿಸ್ತಾರಕ್ಕೆ ಹಲವು ಕಾರಣಗಳನ್ನು ಕೊಡುತ್ತಾ ಹೋಗಬಹುದು. ಹಾಗಾಗಿ ‘ಮಹಾನೆರೆ’ ನೆನಪು ಮಾತ್ರ.
‘ನಿಮ್ಮಲ್ಲಿ ಅಷ್ಟೊಂದು ಮಳೆ ಬರುತ್ತೆ. ನೀರಿಗೆ ತತ್ವಾರ ಅಂತೀರಲ್ಲಾ,’ ಬಯಲು ಸೀಮೆಯ ಬಂಧುಗಳ ಚೋದ್ಯ ಪ್ರಶ್ನೆ. ಮಳೆ ಬರುತ್ತೆ, ಹೋಗುತ್ತೆ. ಮಳೆ ಕಡಿಮೆಯಾದಾಗ ನದಿಯ ನೀರೂ ಕಡಿಮೆಯಾಗುತ್ತದೆ. ಇವೆಲ್ಲಾ ಪ್ರಾಕೃತಿಕವಾದ ಸತ್ಯಗಳು. ಆದರೆ ನದಿಗೆ ಜೀವ ಕೊಡುವ ಪ್ರಯತ್ನವನ್ನು ನಾವೇನಾದರೂ ಮಾಡಿದ್ದೇವಾ?
ಬೇಸಿಗೆಯಲ್ಲಿ ಒಂದೆಡೆ ಕೊಳವೆ ಬಾವಿ ಕೊರೆದರೆ, ಸನಿಹದ ನದಿಯಲ್ಲಿ ನೀರಿನ ಹರಿವು ಕಡಿಮೆಯಾದುದನ್ನು ನೋಡಿದ್ದೇನೆ. ನದಿಯ ನೀರು ಕಡಿಮೆಯಾದಾಗ ಸನಿಹದ ಕೆರೆ, ಬಾವಿಗಳಲ್ಲಿ ನೀರು ಇಳಿಕೆಯಾಗುತ್ತದೆ. ‘ನದಿ ಹುಟ್ಟುವ ಜಾಗದಲ್ಲಿ ಮಳೆ ಬಂದರೆ ಸಾಕಲ್ವಾ’ ಅಂತ ಉಡಾಫೆ ಮಾತನಾಡುತ್ತೇವೆ. ಸಾಕಾಗದು, ಬೇಸಿಗೆಯಲ್ಲಿ ನಾವು ಭೂ ಒಡಲಿಗೆ ಎಷ್ಟು ನೀರನ್ನು ಇಂಗಿಸುತ್ತೇವೋ, ಅಷ್ಟು ಪ್ರಮಾಣದಲ್ಲಿ ನದಿಗಳೂ ಉಸಿರಾಡುತ್ತವೆ. ನದಿಗಳು ಉಸಿರಾಡದಿದ್ದರೆ ನಮ್ಮ ಉಸಿರೂ ನಿಂತುಹೋಗುತ್ತದೆ. ಇದು ಕಾಲದ ಎಚ್ಚರ.
ಕಾಡೇ ನದಿಗಳ ತಾಯಿ. ಒಂದು ಅಂಕದ ಪ್ರಶ್ನೆಯನ್ನು ಶಾಲೆಯಲ್ಲಿ ಸಲೀಸಾಗಿ ಬರೆದುಬಿಟ್ಟ ದಿನಗಳು ನೆನಪಾಗುತ್ತಿದೆಯೇ? ಅವುಗಳ ಸಾಕಾರಕ್ಕೆ ದಿನಗಳು ಕಾಯುತ್ತಿವೆ. ಅಭಿವೃದ್ಧಿಗಾಗಿ ಒಂದಷ್ಟು ಮರಗಳು ಜೀವತೆತ್ತರೆ, ಇನ್ನೊಂದಿಷ್ಟು ಮರಗಳು ಕಾಣದ ಕೈಗಳ ಪಾಲಾಗುತ್ತಿವೆ. ಹಸಿರು ಕಂಡರೆ ಸಾಕು, ಮೈಮೇಲೆ ತುರಿಕೆಯಾದಂತೆ ವರ್ತಿಸುತ್ತೇವಲ್ಲಾ, ಈ ಪಾಪವನ್ನು ಅನುಭವಿಸುವ ದಿವಸ ಬಹಳ ಹತ್ತಿರವಿದೆ.
ಊರಿಗೆ ಊರೇ ನೀರಿಂಗಿಸಿದ್ದರ ಪರಿಣಾಮವಾಗಿ ಐದು ವರುಷಗಳಲ್ಲಿ ರಾಜಸ್ಥಾನದ ನಾಂಡುವಾಲಿ ನದಿ ಪುನರುಜ್ಜೀವವಾದ ಕಥೆ ಮುಂದಿದೆ. ಆದರೆ ನಮ್ಮ ನದಿಗಳು ಕೆಲವು ಉಸಿರಾಡುತ್ತಿವೆ. ಇನ್ನೂ ಕೆಲವು ಉಸಿರು ನಿಲ್ಲಸಿವೆ. ಇವುಗಳ ಉಸಿರಿನ ವೇಗವನ್ನು ಹೆಚ್ಚಿಸುವ ಹೊಣೆ ನಮ್ಮೆಲ್ಲರದು.
ಅಂದು ಪಯಸ್ವಿನಿ ಚಂಡಿಕೆಯಾದಳು. ಈಗ ಭೂಮಿಯು ಅಗ್ನಿದೇವನ ಆಡುಂಬೋಲ.