ಬೆಳ್ಳಾರೆ: ಪರೋಪಕಾರ ಗುಣ ನಮ್ಮೆಲ್ಲರ ರಕ್ತದಲ್ಲಿದೆ. ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಗುಣ ರೋಟರಿಯನ್ನರಿಗಿದೆ. ಅದಕ್ಕಾಗಿಯೇ ರೋಟರಿಯು ವಿಶ್ವಮಾನ್ಯವಾಗಿದೆ ಎಂದು ಪದ ಪ್ರಧಾನ ಕಾರ್ಯಕ್ರಮ ನಡೆಸಿಕೊಟ್ಟ ಮಡಿಕೇರಿಯ ಖ್ಯಾತ ಲೆಕ್ಕ ಪರಿಶೋಧಕರೂ, ರೋಟರಿ ಜಿಲ್ಲೆಯ ಮಾಜಿ ಜಿಲ್ಲಾ ಕಾರ್ಯದರ್ಶಿ ಸಿ.ಎ ಈಶ್ವರ ಭಟ್ ನುಡಿದರು.
ಬೆಳ್ಳಾರೆಯ ಶ್ರೀದೇವಿ ಹೈಟ್ಸ್‍ನ ಸಭಾಂಗಣದಲ್ಲಿ ನಡೆದ 2019-20ನೇ ಸಾಲಿನ ನೂತನ ಸಮಿತಿಯ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕ್ರಮದ ನಿರ್ವಾಹಕನಾಗಿ ಅವರು ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಬಿ. ನರಸಿಂಹ ಜೋಶಿಯವರು ಅಧಿಕಾರ ಸ್ವೀಕರಿಸಿ ಮುಂದಿನ ಯೋಜನೆಗಳ ಬಗ್ಗೆ ವಿವರ ನೀಡಿದರು. ಕ್ಲಬ್ಬಿನ ಉಪಾಧ್ಯಕ್ಷರಾಗಿ ಮೋನಪ್ಪ ಎ, ನಿರ್ದೇಶಕರುಗಳಾಗಿ ರವೀಂದ್ರ ಗೌಡ ಯಂ., ಬಿ. ಸುಬ್ರಹ್ಮಣ್ಯ ಜೋಶಿ, ಶಾಮಸುಂದರ ರೈ, ಚಂದ್ರಶೇಖರ ರೈ, ನವೀನ್ ಕುಮಾರ್ ರೈ, ತಂಬಿನಮಕ್ಕಿ, ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಪಿ. ಎಸ್.ರವರು ಅಧಿಕಾರ ಸ್ವೀಕರಿಸಿದರು. ನೂತನ ಸದಸ್ಯನಾಗಿ ಸೀತಾರಾಮ ಶೆಟ್ಟಿಯವರನ್ನು ಕ್ಲಬ್ಬಿಗೆ ಸೇರ್ಪಡೆಗೊಳಿಸಲಾಯಿತು.
ಮುಖ್ಯ ಅತಿಥಿಯಾದ ಡಿಸ್ಟ್ರಿಕ್ಟ್ ಅಸಿಸ್ಟೆಂಟ್ ಗವರ್ನರ್ ಡಾ| ಪಿ. ಕೆ. ಕೇಶವರವರು ಕ್ಲಬ್ಬಿನಿಂದ ಹೊರತಂದ ರೋಟರಿ ವಾಣಿಯನ್ನು ಬಿಡುಗಡೆಗೊಳಿಸಿ ಕ್ಲಬಿನ ಕಾರ್ಯಚಟುವಟಿಕೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಝೋನಲ್ ಲೆಪ್ಟಿನೆಂಟ್ ಪ್ರಭಾಕರ ಆಳ್ವ ಭಜನಿಗುತ್ತು ಮತ್ತು ಸುಳ್ಯ ಕ್ಲಬಿನ ಅಧ್ಯಕ್ಷ ಡಾ| ಪುರುಷೋತ್ತಮರವರು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ಎ.ಕೆ ಮಣಿಯಾಣಿ ವಹಿಸಿದರು. ವಿನಯ್ ಕುಮಾರ್ ಕೆ. ಸ್ವಾಗತಿಸಿ. ಕಾರ್ಯದರ್ಶಿ ಗೋಪಾಲಕೃಷ್ಣ ಪಿ. ಎಸ್.ರವರು ವರದಿ ವಾಚಿಸಿ ವಂದಿಸಿದರು. ಶ್ಯಾಮಸುಂದರ್ ರೈ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಸಮಿತಿ ಸದಸ್ಯರಿಂದ ವಿವಿಧ ಕೊಡುಗೆಗಳನ್ನು ನೀಡಲಾಯಿತು. ಜಿಲ್ಲಾ ಯೋಜನೆಗಳಾದ ‘ಜೀವನ್ ಸಂಧ್ಯಾ’ ಕಾರ್ಯಕ್ರಮದಡಿ ಇಬ್ಬರು ನಿರ್ಗತಿಕ ವೃದ್ಧ ಮಹಿಳೆಯರಿಗೆ ತಲಾ 25 ಕೆ. ಜಿ. ಅಕ್ಕಿ ಮತ್ತು ರೂಪಾಯಿ ಒಂದು ಸಾವಿರವನ್ನು ನೀಡಲಾಯಿತು. ಎ. ಕೆ. ಮಣಿಯಾಣಿ, ಗೋಪಾಲಕೃಷ್ಣ ಪಿ. ಯಸ್. ಮತ್ತು ಪ್ರಭಾಕರ ಆಳ್ವ ಕೊಡುಗೆ ನೀಡಿ ಸಹಕರಿಸಿದರು. ನೂತನ ಅಧ್ಯಕ್ಷ ನರಸಿಂಹ ಜೋಶಿಯವರ ಪ್ರಾಯೋಜಕತ್ವದಲ್ಲಿ ಬೆಳ್ಳಾರೆ ಕೆ.ಪಿ.ಎಸ್. ಸ್ಕೂಲ್‍ಗೆ ಫ್ಯಾನನ್ನು ನೀಡಲಾಯಿತು. ರೋಟರಿ ಪ್ರಾಯೋಜಕತ್ವದಲ್ಲಿ ಬೆಳ್ಳಾರೆ ಕೆ.ಪಿ.ಎಸ್.ನ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕು| ಹೇಮಾಸ್ವಾತಿ ಕುರಿಯಾಜೆಯವರಿಗೆ ದತ್ತಿನಿಧಿ ಮೊತ್ತ ನೀಡಿ ಗೌರವಿಸಲಾಯಿತು. ರೋಟರಿ ಪೌಂಡೇಶನ್‍ಗೆ ಕ್ಲಬ್ ವತಿಯಿಂದ ಚೆಕ್ ಮೂಲಕ ದೇಣಿಗೆ ನೀಡಲಾಯಿತು.
Advertisement