ಪುತ್ತೂರು: ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸಂಸ್ಮರಣೆ ಕಾರ್ಯಕ್ರಮವು 2019 ಜೂನ್ 30 ರವಿವಾರದಂದು ಅಪರಾಹ್ನ ಗಂಟೆ 2ಕ್ಕೆ ಜರುಗಲಿದೆ.
ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ಗೃಹದಲ್ಲಿ ಸಂಪನ್ನವಾಗುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥದಾರಿ, ನಿವೃತ್ತ ಅಧ್ಯಾಪಕ ಪಾವಲಕೋಡಿ ಗಣಪತಿ ಭಟ್ಟರಿಗೆ ‘ಗೋಪಣ್ಣ ನೆನಪಿನ ಗೌರವ’ ಪ್ರಧಾನ ಮಾಡಲಾಗುವುದು. ಸಮಾರಂಭದ ಬಳಿಕ ತಾಳಮದ್ದಳೆ ನಡೆಯಲಿದೆ.
ಪಾವಲಕೋಡಿ ಗಣಪತಿ ಭಟ್ಟರು ನಿವೃತ್ತ ಅಧ್ಯಾಪಕರು. ಕನ್ಯಾನ, ಉಪ್ಪಿನಂಗಡಿ, ನೆಲ್ಲಿಕಟ್ಟೆ ಶಾಲೆ ಮತ್ತು ಕಾಣಿಯೂರು ಜ್ಯೂನಿಯರ್ ಕಾಲೇಜುಗಳಲ್ಲಿ ಶಿಕ್ಷಕ ವೃತ್ತಿ. ಶಿಸ್ತಿನ ಅಧ್ಯಾಪಕನೆನ್ನುವ ನೆಗಳ್ತೆ. ಶಿಕ್ಷೆಯೂ ಶಿಕ್ಷಣವೂ ಜತೆಜತೆಯಲ್ಲಿರುವಾಗ ರೂಪುಗೊಂಡ ವಿದ್ಯಾರ್ಥಿ ಸಮೂಹ ಪಾವಲಕೋಡಿಯವರನ್ನು ಈಗಲೂ ಗೌರವಿಸುತ್ತಾರೆ.
ಇವರು ಯಕ್ಷಗಾನ ಅರ್ಥದಾರಿ, ವೇಷಧಾರಿ. ಪುತ್ತೂರು ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಲ್ಲಿ ಬಹುಕಾಲ ಸಕ್ರಿಯರು. ಬಹುತೇಕ ಖಳಪಾತ್ರಗಳ ಸುಲಲಿತ ನಿರ್ವಹಣೆ. ಶುಂಭ, ಚಂಡ-ಮುಂಡ, ಯಮ, ಕಂಸ, ವೀರಭದ್ರ.. ಮೊದಲಾದ ಪಾತ್ರಗಳ ಸ್ವ-ನಿರ್ಮಿತ ವಿನ್ಯಾಸ. ನಿಯಮಿತವಾದ ಓದುವಿಕೆ. ಒಂದು ಕಾಲಘಟ್ಟದ ಯಕ್ಷಬದುಕಿಗೆ ಪಾವಲಕೋಡಿ ಗಣಪತಿ ಭಟ್ಟರು ಇತಿಹಾಸವಾಗಿ ನಮ್ಮೊಡನಿದ್ದಾರೆ. ಅವರ ದೀರ್ಘ ಕಲಾಯಾನಕ್ಕೆ ಈಗ ಪುತ್ತೂರು ಗೋಪಣ್ಣ ನೆನಪಿನ ಗೌರವ.
ಕಳೆದ ವರುಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್ಟರಿಗೆ ಪ್ರದಾನ ಮಾಡಲಾಗಿತ್ತು. ಗೋಪಣ್ಣ ಅವರ ಚಿರಂಜೀವಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.