ಕಡಬ: ಕೊಂಬಾರು ನಿವಾಸಿ, ವೃದ್ಧ ರಾಮಣ್ಣ ಗೌಡರ ಮೇಲೆ ಕಡಬ ಪೇಟೆಯಲ್ಲಿ ಕಡಬ ಪೆÇಲೀಸ್ ಠಾಣೆಯ ಸಿಬಂದಿಯೋರ್ವ ಸಾರ್ವಜನಿಕವಾಗಿ ಲಾಠಿಯಿಂದ ಅಮಾನವೀಯ ಹಲ್ಲೆ ನಡೆಸಿರುವುದನ್ನು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಖಂಡಿಸಿದ್ದು, ಆರೋಪಿ ಪೆÇಲೀಸ್ ಸಿಬಂದಿಯನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ಕಡಬ ತಾಲೂಕು ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಅವರು ಹೇಳಿದ್ದಾರೆ.
ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಎ.21 ರಂದು ಐತಿಹಾಸಿಕ ಕಡಬ ಜಾತ್ರೆಯ ದೈವಗಳ ಕಾರ್ಯಕ್ರಮದ ನಿಮಿತ್ತ ಸಾಗುತ್ತಿದ್ದ ಮೆರವಣಿಯ ಸಂದರ್ಭ ವಯೋ ವೃದ್ಧ ಕೊಂಬಾರು ನಿವಾಸಿ ರಾಮಣ್ಣ ಗೌಡರಿಗೆ ಸಾರ್ವಜನಿಕವಾಗಿ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಪಂಪಾಪತಿ ಲಾಠಿಯಿಂದ ಹಲ್ಲೆ ನಡೆಸಿದ್ದು , ಈ ಸಂದರ್ಭದಲ್ಲಿ ಕುಸಿದು ಬಿದ್ದ ವೃದ್ದರನ್ನು ಆಸ್ಪತ್ರೆಗೆ ಸಾಗಿಸದೆ ರಸ್ತೆಯಲ್ಲಿಯೇ ಬಿಟ್ಟು ತೆರಳಿದ್ದರು. ಇದು ಅಕ್ಷಮ್ಯ ಅಪರಾಧವಾಗಿದ್ದು, ಶಾಂತಿ ಕಾಪಾಡಬೇಕಾಗಿದ್ದ ಪೊಲೀಸರೇ ಈ ರೀತಿ ವರ್ತಿಸಿರುವುದರಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಘಟನೆಯಿಂದಾಗಿ ನಮಗೆ ತೀವ್ರ ನೋವುಂಟಾಗಿದೆ. ರಾಮಣ್ಣ ಗೌಡರು ಮಾನಸಿಕ ಅಸ್ವಸ್ಥರಂತೆ ವರ್ತಿಸಲು ಪೋಲಿಸರೇ ಕಾರಣವಾಗಿದ್ದಾರೆ ಎಂದು ಅನುಮಾನವಿದೆ ಎಂದ ತಮ್ಮಯ್ಯ ಗೌಡ ಅವರು ಕೆಲವು ಸಮಯಗಳ ಹಿಂದೆ ರಾಮಣ್ಣ ಗೌಡರು ತನ್ನಲ್ಲಿದ್ದ 1.70 ಸಾವಿರ ರೂ. ನಗದನ್ನು ಬ್ಯಾಂಕಿಗೆ ಹಾಕಲು ಕಡಬಕ್ಕೆ ಬಂದಿದ್ದಾಗ ಅಸ್ವಸ್ಥರಾಗಿ ಆಸ್ಪತ್ರೆಗೆ ತೆರಳಿದ್ದರು. ಅವರು ಅಸ್ವಸ್ಥರಾಗಿದ್ದ ಕಾರಣದಿಂದ ಅವರಲ್ಲಿದ್ದ ಹಣವನ್ನು ಆಸ್ಪತ್ರೆಗಳ ಸಿಬ್ಬಂದಿಗಳೇ ಪೋಲಿಸರಿಗೆ ಒಪ್ಪಿಸಿದ್ದರು. ಬಳಿಕ ಆ ಹಣ ರಾಮಣ್ಣ ಗೌಡರ ಕೈ ಸೇರಲಿಲ್ಲ ಎನ್ನಲಾಗಿದ್ದು, ಬಳಿಕ ರಾಮಣ್ಣ ಗೌಡರು ಸ್ಟೇಷನ್‍ಗೆ ಅಲೆದಾಟ ನಡೆಸಿದರೂ ಅವರನ್ನು ಗದರಿಸಿ ಕಳಿಸಲಾಗಿತ್ತು ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ರಾಮಣ್ಣ ಗೌಡರು ಪೋಲಿಸರ ವಿರುದ್ದ್ಧ ಬಹಳ ನೊಂದಿರುವುದು ರಾಮಣ್ಣ ಗೌಡ ಮತ್ತು ಅವರ ಪತ್ನಿಯನ್ನು ಹಾಗೂ ಸಾರ್ವಜನಿಕ ಮಾಹಿತಿಯನ್ನು ವಿಚಾರಿಸಿದಾಗ ತಿಳಿದು ಬಂದಿದೆ. ಆದುದರಿಂದ ಅವರ ಹಣದ ವಿಚಾರ ಏನು ಮತ್ತು ಆ ಹಣ ಏನಾಗಿದೆ ಎಂದು ತನಿಖೆ ಆಗಬೇಕು ಎಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘ ಆಗ್ರಹಿಸುತ್ತದೆ. ಅಲ್ಲದೆ ಸಾರ್ವಜನಿಕವಾಗಿ ಮುಖ್ಯ ರಸ್ತೆಯ ಬದಿಯಲ್ಲಿ ವಯೋ ವೃದ್ಧರನ್ನು ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದ್ದು , ಈ ಬಗ್ಗೆ ಪೆÇಲೀಸ್ ಸಿಬ್ಬಂದಿ ಪಂಪಾಪತಿಯವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು, ಇಲ್ಲದಿದ್ದಲ್ಲಿ ಕಡಬ ಒಕ್ಕಲಿಗ ಗೌಡ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರು ಸೇರಿಕೊಂಡು ಬೇಡಿಕೆ ಈಡೇರುವವರೆಗೂ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಕಾರ್ಯದರ್ಶಿ ಮಂಜುನಾಥ ಗೌಡ ಕೊಲಂತ್ತಾಡಿ, ಮಹಿಳಾ ಘಟಕದ ಅಧ್ಯಕ್ಷೆ ನೀಲಾವತಿ ಶಿವರಾಮ, ಯುವ ಘಟಕದ ಗೌರವಾಧ್ಯಕ್ಷ ಗಣೇಶ್ ಗೌಡ ಕೈಕುರೆ, ಹಿರಿಯರಾದ ಸಾಂತಪ್ಪ ಗೌಡ ಪಿಜಕಳ, ಪ್ರಮುಖರಾದ ಸೀತಾರಾಮ ಗೌಡ ಪೊಸವಳಿಕೆ, ಕಿಶೋರ್ ಕುಮಾರ್ ಬರಮೇಲು, ಮೋಹನ್ ಗೌಡ ಕೆರೆಕೋಡಿ, ಗಿರೀಶ್ ಕೊರಂದೂರು, ಗೀತಾ ಅಮೈ ಕೇವಳ, ನವೀನ್ ಕಲ್ಲಾಜೆ, ಸೇಷಪ್ಪ, ದಿವಾಕರ ಮೊದಲಾದವರು ಉಪಸ್ಥಿತರಿದ್ದರು.