ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಉಂಟಾದ ನಷ್ಟಗಳ ಬಗ್ಗೆ ಅಧ್ಯಯನ ನಡೆಸಲು ಕೆ.ಪಿ.ಸಿ.ಸಿ ನೇಮಕ ಮಾಡಿದ ತಂಡ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗುತ್ತಿದೆ. ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ಸಮಿತಿ ಸೋಮವಾರ ಸುಳ್ಯಕ್ಕೆ ಆಗಮಿಸಿದರು. ತಾಲೂಕಿನ ಕೆಲವೆಡೆ ಆಗಿರುವ ಹಾನಿಯನ್ನು ತಂಡ ವೀಕ್ಷಿಸಿದೆ. ಬಳಿಕ ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಪ್ರಮುಖರ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ದಕ್ಣಿಣ ಕನ್ನಡ ಜಿಲ್ಲೆಯಲ್ಲಿ ಕಂಡು ಕೇಳರಿಯದಷ್ಟು ಭೀಕರವಾದ ಹಾನಿ ಸಂಭವಿಸಿದೆ. ಈ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕೆಪಿಸಿಸಿ ನಿರ್ದೇಶನದ ಮೇರೆಗೆ ವಿವಿಧ ಭಾಗಗಳಲ್ಲಿ ಕೂಲಂಕುಷ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು. ಇದರ ಆಧಾರದಲ್ಲಿ ಪರಿಹಾರಕ್ಕೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ರಮಾನಾಥ ರೈ ಹೇಳಿದರು.
ಪರಿಹಾರ ಮುಟ್ಟಿಲ್ಲ: ಸರಕಾರ ಘೋಷಣೆ ಮಾಡಿರುವ ತುರ್ತು ಪರಿಹಾರ 10 ಸಾವಿರ ರೂ ತೀರಾ ಕಡಿಮೆಯಾಯಿತು. 50 ಸಾವಿರ ತುರ್ತು ಪರಿಹಾರ ನೀಡಬೇಕು. ಆದರೆ ಜಿಲ್ಲೆಯಲ್ಲಿ ಬಹುತೇಕ ಮಂದಿಗೆ ತುರ್ತು ಪರಿಹಾರ 10 ಸಾವಿರವನ್ನೂ ನೀಡಿಲ್ಲ ಎಂದು ರಮಾನಾಥ ರೈ ಹೇಳಿದರು. ಮನೆ ಸಂಪೂರ್ಣ ಹಾನಿ ಆದವರಿಗೆ 5 ಲಕ್ಷ ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿರುವುದು ತುಂಬಾ ಕಡಿಮೆಯಾಯಿತು. ಸಂತ್ರಸ್ತರ ಸಹಾಯಕ್ಕಾಗಿ ಕೊಡಗು ಪತಿಹಾರ ಪ್ಯಾಕೇಜ್ ಮಾದರಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯದಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪದ ಪರಿಹಾರ ಕಾರ್ಯದಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ದೂರಿದರು.
ಕೆಪಿಸಿಸಿ ಕಡೆಯಿಂದ ಪರಿಹಾರ:ಕೆಪಿಸಿಸಿ ಕಡೆಯಿಂದಲೂ ಸಂತ್ತಸ್ತರಿಗೆ ಪರಿಹಾರ ನೀಡಲಾಗುವುದು. ಅದೇ ರೀತಿ ದಕ್ಷಿಣ ಕನ್ನಡ ಕಾಂಗ್ರೆಸ್ ವತಿಯಿಂದ ಅಧ್ಯಕ್ಷ ಕೆ.ಹರೀಶ್ ಕುಮಾರ್ ನೇತೃತ್ವದಲ್ಲಿ ಧನ ಸಂಗ್ರಹ ಕಾರ್ಯ ನಡೆಸಲಾಗುತ್ತಿದ್ದು ಅದನ್ನು ಸಂತ್ರಸ್ತರಿಗೆ ನೀಡಲಾಗುವುದು. ರಾಜೀವ್ ಗಾಂಧಿ ಅವರ 75ನೇ ಜನ್ಮ ದಿನವನ್ನು ಪ್ರವಾಹ ಪೀಡಿತ ಬೆಳ್ತಂಗಡಿಯ ಕಿಲ್ಲೂರು ಮತ್ತು ಚಾರ್ಮಾಡಿಯಲ್ಲಿ ಪ್ರವಾಹ ಪೀಡಿತರ ಜೊತೆಯಲ್ಲಿ ಆಚರಿಸಲಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ, ಶಾಸಕ ಯು.ಟಿ.ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಪ್ರಮುಖರಾದ ಎಸ್.ಸಂಶುದ್ದೀನ್, ಧನಂಜಯ ಅಡ್ಪಂಗಾಯ, ಕೃಷ್ಣಪ್ಪ, ದಿವ್ಯಪ್ರಭಾ ಚಿಲ್ತಡ್ಕ, ಗೀತಾ ಕೋಲ್ಚಾರ್, ಕಳಂಜ ವಿಶ್ವನಾಥ ರೈ, ಪಿ.ಸಿ.ಜಯರಾಮ, ಪಿ.ಎಸ್.ಗಂಗಾಧರ, ಬೆಟ್ಟ ರಾಜಾರಾಮ ಭಟ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್, ಕೆ.ಎಂ.ಮುಸ್ತಫಾ, ಬೆಟ್ಟ ಜಯರಾಂ ಭಟ್, ಧರ್ಮಪಾಲ ಕೊಯಿಂಗಾಜೆ, ಭವಾನಿಶಂಕರ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ಸುಧೀರ್ ರೈ ಮೇನಾಲ, ಡೇವಿಡ್ ಧೀರಾ ಕ್ರಾಸ್ತಾ, ಸುಜಯಾಕೃಷ್ಣ, ಲಕ್ಷ್ಮಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು .