ಸುಳ್ಯ: ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತುರ್ತು ಅಗತ್ಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆರು ಕೋಟಿ ರೂವನ್ನು ನೀಡಲಾಗಿದ್ದು ಪ್ರತಿ ತಾಲೂಕಿಗೆ 25 ಲಕ್ಷದಂತೆ ಹಣ ಬರಲಿದೆ. ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಸಂತ್ರಸ್ತರಾದವರಿಗೆ ಎಲ್ಲಾ ನೆರವನ್ನೂ ಕೂಡಲೇ ಒದಗಿಸುವಂತೆ ಐವನ್ ಡಿಸೋಜ ಹೇಳಿದರು.
ಪ್ರಕೃತಿ ವಿಕೋಪದಿಂದ ಮನೆ ಮತ್ತಿತರ ಹಾನಿ ಉಂಟಾದರೆ ಭಾಗಶ: ಹಾನಿ ಎಂದು ವರದಿ ನೀಡಿದರೆ ಸಂತ್ರಸ್ತರಿಗೆ ಅನ್ಯಾಯ ಆಗುತ್ತದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು. ಈ ಕುರಿತು ಚರ್ಚೆ ನಡೆದು ಮನೆ ಮತ್ತಿತರ ಹಾನಿ ಉಂಟಾದರೆ ಅವರಿಗೆ ಗರಿಷ್ಠ ಪರಿಹಾರ ಒದಗಿಸಬೇಕು ಮತ್ತು ಬೇರೆ ಯೋಜನೆಗಳಲ್ಲಿ ಸೇರಿಸಿ ಮನೆ ನಿರ್ಮಾಣ ಮಾಡಿ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಐವನ್ ಡಿಸೋಜ ಸೂಚಿಸಿದರು.