ಸುಳ್ಯ:ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟ ಘಟನೆ ಸುಳ್ಯ ನಗರದ ಹಳೆಗೇಟು ಸಮೀಪ ಶನಿವಾರ ಸಂಜೆ ನಡೆದಿದೆ. ಹಳೆಗೇಟು ವಿದ್ಯಾನಗರದ ನಿವೃತ್ತ ಶಿಕ್ಷಕ ಹರಿಪ್ರಸಾದ್ ಅವರ ಪತ್ನಿ ನಿವೃತ್ತ ಶಿಕ್ಷಕಿ ಮೀನಾಕ್ಷಿ.ಕೆ.ಎ(66) ಮೃತಪಟ್ಟವರು.
ಹರಿಪ್ರಸಾದ್ ಮತ್ತು ಮೀನಾಕ್ಷಿ ಅವರು ಮುಖ್ಯ ರಸ್ತೆಯಲ್ಲಿ ರಿಕ್ಷಾ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಸುಬ್ರಹ್ಮಣ್ಯದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಮೀನಾಕ್ಷಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಂಡೆಕೋಲಿನಲ್ಲಿ ಸಂಧಿಕರ ಮನೆಯಲ್ಲಿ ಪೂಜೆಗೆ ಹೋಗಿ ಹಿಂತಿರುಗಿ ಬಂದು ರಿಕ್ಷಾ ಇಳಿದು ಮನೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಹರಿಪ್ರಸಾದ್ ರಸ್ತೆ ದಾಟಿದ್ದರು. ಹಿಂದಿನಿಂದ ರಸ್ತೆ ದಾಟುತ್ತಿದ್ದ ಮೀನಾಕ್ಷಿ ಅವರಿಗೆ ಬಸ್ ಡಿಕ್ಕಿ ಹೊಡೆದಿದೆ. ಶಾಂತಿನಗರ, ಕೊಯಿಕುಳಿ, ಅಯ್ಯನಕಟ್ಟೆ ಸೇರಿ ಹಲವು ಕಡೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಮೀನಾಕ್ಷಿ ಅವರು ಆರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಪತಿ, ಮಕ್ಕಳಾದ ಶೋಭಾ, ಶ್ರೀರಂಜನಿ, ಗುರುರಾಜ್ ಅವರನ್ನು ಅಗಲಿದ್ದಾರೆ
ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.