ಸುಳ್ಯ: ಆಲೆಟ್ಟಿ-ಕೋಲ್ಚಾರು-ಕಣಕ್ಕೂರು-ಬಂದಡ್ಕ ಅಂತಾರಾಜ್ಯ ರಸ್ತೆಯಲ್ಲಿ 2.60 ಕಿ.ಮಿ.ರಲ್ಲಿ ಬಾರ್ಪಣೆ ಎಂಬಲ್ಲಿ ಹಳೆ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಸುವ ಸಲುವಾಗಿ ಸುಳ್ಯ-ಆಲೆಟ್ಟಿ-ಬಂದಡ್ಕ ರಸ್ತೆಯಲ್ಲಿ ಡಿ.18ರಿಂದ 2020 ಮಾರ್ಚ್ 31ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.
ಇಲ್ಲಿನ ಹಳೆಯ ಸೇತುವೆಯನ್ನು ಕೆಡವಿ 10 ಮೀಟರ್ ಅಗಲದಲ್ಲಿ ಹೊಸ ಸೇತುವೆ ನಿರ್ಮಿಸಲಾಗುತ್ತಿದ್ದು ಸೇತುವೆಯ ಎರಡೂ ಬದಿಯಲ್ಲಿ ತೆಂಗು, ಅಡಿಕೆ ತೋಟವಿರುವ ಕಾರಣ ಬದಲಿ ರಸ್ತೆ ನಿರ್ಮಿಸಲು ಅವಕಾಶ ಇರುವುದಿಲ್ಲ. ಈ ಹಿನ್ನಲೆಯಲ್ಲಿ ರಸ್ತೆಯಲ್ಲಿ ಸುಮಾರು ಮೂರೂವರೆ ತಿಂಗಳ ಕಾಲ ಈ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ. ಬಾರ್ಪಣೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಲ್ಲಿ 91 ಲಕ್ಷ ರೂ ಅನುದಾನ ಬಿಡುಗಡೆಗೊಂಡಿದೆ.
ಸಂಚಾರಕ್ಕೆ ಬದಲಿ ರಸ್ತೆ: ಸುಳ್ಯ-ಬಂದಡ್ಕ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ರಸ್ತೆಗಳನ್ನು ಸೂಚಿಸಲಾಗಿದೆ. ಬಂದಡ್ಕದಿಂದ ಸುಳ್ಯಕ್ಕೆ ಬರುವ ವಾಹನಗಳು ಕೊಲ್ಲರಮೂಲೆ-ಕರ್ಲಪ್ಪಾಡಿ ದ್ವಾರ-ಕಾಂತಮಂಗಲ ಸೇತುವೆ ಮೂಲಕ ಹಾಗು ಸುಳ್ಯದಿಂದ ಬಂದಡ್ಕಕ್ಕೆ ಹೋಗುವ ವಾಹನಗಳು ಕಾಂತಮಂಗಲ ಸೇತುವೆ-ಕರ್ಲಪ್ಪಾಡಿ ದ್ವಾರ-ಕೊಲ್ಲರಮೂಲೆ ಮೂಲಕ ಸಂಚರಿಸಬಹುದು ಎಂದು ಸುಳ್ಯ ಲೋಕೋಪಯೋಗಿ ಇಲಾಖೆಯ ಪ್ರಕಟಣೆ ತಿಳಿಸಿದೆ.