ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದೊಳಗಿನ ಕಾಡಿನಲ್ಲಿ ಕಾಡಾನೆಯೊಂದು ಗಾಯಗೊಂಡ ಸ್ಥಿತಿಯಲ್ಲಿರುವುದು ಬುಧವಾರ ಕಂಡುಬಂದಿಂದಿದೆ. ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು ಬುಧವಾರ ಕಾಡಿನಿಂದ ಹರಿದು ಬರುವ ಝರಿ ನೀರಿನ ಪೈಪು ಸರಿಪಡಿಸಲೆಂದು ಕಾಡಿನತ್ತ ತೆರಳಿದಾಗ ಗಾಯಗೊಂಡ ಆನೆ ಪತ್ತೆಯಾಗಿತ್ತು.
ಆನೆ ಇರುವುದರ ಬಗ್ಗೆ ಸುಬ್ರಹ್ಮಣ್ಯ ಅರಣ್ಯ ಇಲಾಖೆ ಸಿಬಂದಿಗಳಿಗೆ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಸಿಬಂದಿಗಳು ಬುಧವಾರ ಬೆಳಗ್ಗೆ ಆನೆಯಿರುವ ಕಾಡಿನತ್ತ ತೆರಳಿ ಪರಿಶೀಲಿಸಿದರು. ಆನೆಯ ಮುಂಭಾಗದ ಕಾಲಿಗೆ ಏಟಾಗಿರುವುದು ಗಮನಕ್ಕೆ ಬಂದಿದೆ. ನೋವಿನಿಂದ ಬಳಲುತ್ತಿರುವ ಆನೆಯು ನೋವು ತಡೆಯಲಾರದೆ ಘೀಳಿಡುತ್ತಿದೆ. ಹತ್ತಿರಕ್ಕೆ ತೆರಳಿದರೆ ಮರವನ್ನು ಅಲ್ಲಾಡಿಸಿ ಗದರಿಸುತ್ತಿದೆ. ಸೊಂಡಿಲಿನಿಂದ ಸೊಪ್ಪು ಕಲ್ಲುಗಳನ್ನು ಎಸೆಯುತ್ತಿದೆ.
ಬಾಳುಗೋಡು ಪರಿಸರದ ಪದಕ ಮಿತ್ತಡ್ಕ ಪರಿಸರದಲ್ಲಿ ಕಳೆದ ಹತ್ತು ದಿನಗಳಿಂದ ಆನೆಯೊಂದು ಆಗಾಗ್ಗೆ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅದು ಕೃಷಿಕರ ತೋಟಗಳಿಗೆ ದಾಳಿ ನಡೆಸುತ್ತಿತ್ತು. ಬುಧವಾರ ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿರುವ ಆನೆ ಇದೇ ಆಗಿರಬಹುದೆನ್ನುವ ಶಂಕೆಯನ್ನು ಸ್ಥಳಿಯ ಮಿತ್ತಡ್ಕ ನಿವಾಸಿ ಪ್ರಶಾಂತ ಎನ್ನುವವರು ವ್ಯಕ್ತಪಡಿಸಿದರು.
ಬಾಳುಗೋಡು ಮೀಸಲು ಅರಣ್ಯದೊಳಗೆ ಕಾಡಾನೆ ಗಾಯಗೊಂಡು ಇರುವುದು ನಮ್ಮ ಗಮನಕ್ಕೆ ಬಂದಿದೆ. ಆನೆಗೆ ಚಿಕಿತ್ಸೆಯ ಅಗತ್ಯತೆ ಇದೆ. ಗುರುವಾರ ಮತ್ತೆ ಕಾಡಿಗೆ ತೆರಳಿ ಆನೆಯ ಚಲನವಲನವನ್ನು ಗಮನಿಸುತ್ತೇವೆ ಎಂದು ಸುಬ್ರಹ್ಮಣ್ಯ ಅರಣ್ಯ ವಿಭಾಗದ ಆರ್ ಎಪ್ ಒ ತ್ಯಾಗರಾಜ್ ತಿಳಿಸಿದ್ದಾರೆ.