# ಸ್ಪೆಶಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಮಂಗಳೂರು : ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸರಕಾರ ರಚನೆ ಮಾಡಲು ಹೊರಟಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನಿಂದ ಇದುವರೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ನಡುವೆ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಅವರು ನೇಮಕವಾಗಲಿದ್ದಾರೆ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇರ ಸಂಪರ್ಕ ಹಾಗೂ ನಿಷ್ಟಾವಂತ ಸ್ವಯಂ ಸೇವಕ ಎಂಬ ನೆಲೆಯಲ್ಲಿ ಹಾಗೂ ಸಂಘಟನೆಯಲ್ಲಿ ಎತ್ತಿದ ಕೈಯಾಗಿರುವ ನಳಿನ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಲಭ್ಯವಾಗಲಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಹೊರತುಪಡಿಸಿ ಇತರ ಯಾರಿಗಾದರೂ ನೀಡಿ ಯಡಿಯೂರಪ್ಪ ಅವರಿಗೆ ಪ್ರಮುಖ ರಾಜ್ಯದ ರಾಜ್ಯಪಾಲ ಹುದ್ದೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. `
ಈ ಬಾರಿ ಬಿಜೆಪಿ ಸರಕಾರ ರಚನೆಯಾದರೆ ಕಳೆದ ಬಾರಿಯಂತೆ ಯಾವುದೇ ರೀತಿಯಲ್ಲೂ ಗೊಂದಲ ಏರ್ಪಡಬಾರದು ಹಾಗೂ ಶಾಸಕರಾಗಿ ಉತ್ತಮ ಕೆಲಸ ಮಾಡಿರುವ ಹಾಗೂ ಕ್ಷೇತ್ರದಲ್ಲೂ ಉತ್ತಮ ಅಭಿಪ್ರಾಯ ಹೊಂದಿರುವ ಮಂದಿಗೆ ಸಚಿವ ಸ್ಥಾನ ನೀಡಲು ಯೋಚನೆ ನಡೆದಿದೆ. ಜಾತಿ ಲೆಕ್ಕಾಚಾರದಲ್ಲಿ ಯಾವುದೇ ಸ್ಥಾನ ನೀಡದೇ ಇರಲು ಈ ಬಾರಿ ಚಿಂತನೆ ನಡೆದಿದ್ದು ಭ್ರಷ್ಟಾಚಾರ ಸೇರಿದಂತೆ ಯಾವುದೇ ಕಪ್ಪುಚುಕ್ಕೆ ಇದ್ದರೆ ಅಂತಹವರಿಗೂ ಸಚಿವ ಸ್ಥಾನ ನೀಡದೇ ಇರಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸರಕಾರ ರಚನೆ ಮಾಡುವುದಾದರೆ ಇದೆಲ್ಲಾ ಗಮನಿಸಿಯೇ ರಚನೆ ಮಾಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.