* ಸ್ಪೆಷಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆ ಬುಧವಾರ ನಡೆಯಲಿದ್ದು ಚುನಾವಣಾ ಪ್ರಚಾರ ಸೋಮವಾರ ಸಂಜೆ ಕೊನೆಗೊಂಡಿದೆ.
ಕಳೆದ 15 ದಿನಗಳಿಂದ ಉರಿ ಬಿಸಿಲನ್ನೂ ಲೆಕ್ಕಿಸದೆ ನಗರ ಪಂಚಾಯತ್ ನ ವಾರ್ಡ್ ವಾರ್ಡ್ ಗಳಲ್ಲಿ ನಡೆದ ಅಬ್ಬರದ ಪ್ರಚಾರಕ್ಕೆ ತೆರೆ ಬೀಳುವುರೊಂದಿಗೆ ರಾಜಕೀಯ ಪಕ್ಷಗಳ ಚಿತ್ತ 29 ರಂದು ಮತದಾರರು ನೀಡುವ ತೀರ್ಪಿನತ್ತ ನೆಟ್ಟಿದೆ. ಮನೆ ಮನೆ ಭೇಟಿ ನೀಡಿ ಮತದಾರರನ್ನು ಮುಖತಃ ಭೇಟಿ ಮಾಡಿ ಓಲೈಕೆ .ಮಾಡುವ ಚುನಾವಣಾ ಪ್ರಚಾರವನ್ನು ಎಲ್ಲಾ ಪಕ್ಷದವರೂ ಮಾಡಿದ್ದರು. ಬಹಿರಂಗ ಪ್ರಚಾರ ಸಭೆ, ಪ್ಲೆಕ್ಸ್, ಬ್ಯಾನರ್, ಮೈಕಾಸುರನ ಅಬ್ಬರದ ಪ್ರಚಾರ ಎಲ್ಲೂ ಕಂಡು ಬಂದಿರಲಿಲ್ಲ. ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಎರಡು, ಮೂರು, ಕೆಲವೆಡೆ ನಾಲ್ಕು ಹಂತದಲ್ಲಿ ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಿದ್ದಾರೆ.
ಗೆಲುವಿನ ಲೆಕ್ಕಾಚಾರ ಹೇಗೆ..?
ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಾಗ ಎಲ್ಲಾ ಪಕ್ಷಗಳು ತಾವು ಪಡೆಯಬಹುದಾದ ಸ್ಥಾನಗಳ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ಅಧಿಕಾರಕ್ಕಾಗಿ ‘ಟಗ್ ಆಫ್ ವಾರ್‘ ನಡೆಯಲಿದೆ. 20 ವಾರ್ಡ್ ಗಳಲ್ಲಿ 12ರಿಂದ 15 ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತ ಎನ್ನುತ್ತಾರೆ ಬಿಜೆಪಿ ನಾಯಕರು.
10 ವಾರ್ಡ್ ಗಳಲ್ಲಿ ಗೆಲುವು ನಿಶ್ಚಿತ. ಮೂರು ವಾರ್ಡ್ ಗಳಲ್ಲಿ ತೀವ್ರ ಪೈಪೋಟಿ ಇದ್ದರೂ ಇದರಲ್ಲಿ ಕನಿಷ್ಠ ಎರಡು ಬರುವ ಸಾಧ್ಯತೆ ಇದ್ದು 12 ಸ್ಥಾನದೊಂದಿಗೆ ಅಧಿಕಾರ ಪಡೆಯಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಲೋಕಸಭಾ ಚುನಾವಣಾ ಫಲಿತಾಂಶ ನಗರ ಪಂಚಾಯತ್ ನಲ್ಲೂ ಪ್ರಭಾವ ಬೀರುವ ಸಾಧ್ಯತೆ ಇದರಿಂದ ಹೆಚ್ಚಿನ ಸ್ಥಾನಗಳು ಲಭಿಸಬಹುದು ಎಂಬುದು ಬಿಜೆಪಿ ನಿರೀಕ್ಷೆ.
ನ.ಪಂ.ಚುನಾವಣೆ ಸ್ಥಳೀಯ ಸಮಸ್ಯೆಗಳ ಆಧಾರದಲ್ಲಿ ನಡೆಯಲಿದ್ದು ಮತದಾರರ ತೀರ್ಪು ಸ್ಥಳೀಯ ಸಮಸ್ಯೆಗಳನ್ನು ಕೇಂದ್ರೀಕರಿಸಿ ಅದರ ಆಧಾರದಲ್ಲಿ ಹೊರ ಬರಲಿದೆ ಎಂಬುದು ಕಾಂಗ್ರೆಸ್ ವಾದ.
ಇನ್ನು ಉಳಿದಂತೆ ಎಸ್ ಡಿಪಿಐ ಅಭ್ಯರ್ಥಿಗಳು ಎರಡು ವಾರ್ಡ್ ಗಳಲ್ಲಿ, ಆಮ್ ಆದ್ಮಿ ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಒಂದು ಕಡೆ ಗೆಲ್ಲಬಹುದು ಎಂಬುದು ಈ ಪಕ್ಷಗಳ ವಿಶ್ವಾಸ. ಕೆಲವು ವಾರ್ಡ್ ಗಳಲ್ಲಿ ತೀವ್ರ ಪೈಪೋಟಿ ನೀಡುವ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.