ಮಂಗಳೂರು: ದೇರಳಕಟ್ಟೆ ಸಮೀಪದ ಬೆಳ್ಮ ಸೇವಾಶ್ರಮದಲ್ಲಿ ಸುಳ್ಯ ಮತ್ತು ಬೆಳ್ಳಾರೆಯಲ್ಲಿ ಕಾರ್ಯರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪರಿತ್ಯಕ್ತ ತಾಯಂದಿರ ಜೊತೆ ಬೆರೆತು ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಿಕೊಂಡರು.
ವೃದ್ಧ ಅನಾಥ ತಾಯಂದಿರಿಗೆ ಉಚಿತ ಸೇವಾಶ್ರಮ ನಡೆಸುತ್ತಿರುವ ಬೆಳ್ಮ ಸೇವಾಶ್ರಮದಲ್ಲಿ ಸೋಮವಾರ ಹಬ್ಬದ ವಾತಾವರಣ. ಜ್ಞಾನದೀಪ ಸಂಸ್ಥೆಯ ವಿದ್ಯಾರ್ಥಿಗಳು ಆಶ್ರಮದಲ್ಲಿರುವ ತಾಯಂದಿರ ಜೊತೆ ಬೆರೆತು ದೀಪಾವಳಿ ಆಚರಿಸಿದರು. ವಿದ್ಯಾರ್ಥಿಗಳು ರಂಗೋಲಿ ಬಿಡಿಸಿ, ಹಣತೆ ಹಚ್ಚಿದರು. ಆಶ್ರಮದಲ್ಲಿರುವ ವಯೋವೃದ್ಧರ ಜೊತೆ ಕುಶಲೋಪರಿ ನಡೆಸಿ, ಸಹಭೋಜನ ಮಾಡಿ, ಹಣ್ಣು ಹಂಪಲು ವಿತರಿಸಿ ಬದುಕಿನ ಶಿಕ್ಷಣ ಪಡೆದರು.
ಆಶ್ರಮದ ಮ್ಯಾನೇಂಜಿಂಗ್ ಟ್ರಸ್ಟಿ ಜಿ.ಆರ್ ಶೆಟ್ಟಿ ಮತ್ತು ಟ್ರಸ್ಟಿ ಶ್ಯಾಮಲಾ ಶೆಟ್ಟಿ ದೀಪ ಬೆಳಗುವುದರ ಮೂಲಕ ದೀಪಾವಳಿ ಆಚರಣೆಯನ್ನು ಉದ್ಘಾಟಿಸಿದರು. ಆಶ್ರಮದ ಮೇಲ್ವಿಚಾರಕ ಬಾಲಕೃಷ್ಣ, ಉಪನ್ಯಾಸಕರುಗಳಾದ ಶಿವಪ್ರಸಾದ್, ಜಲಜಾ, ಅಮಿತಾ ವೈ ಶೆಟ್ಟಿ, ದಿವ್ಯಾ, ದೀಪ್ತಿ, ಸೌಮ್ಯಾ, ಮೌಸಮಿ, ವಿದ್ಯಾರ್ಥಿ ನಾಯಕ ಸುಮಿತ್ ಕರ್ಕೆರ, ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಯಶ್ಮಿತಾ, ಸಂತೋಷ್ ನಾಯಕ್ ಕೊಡಿಯಾಲ ಉಪಸ್ಥಿತರಿದ್ದರು.
ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಪ್ರಸ್ತಾವಿಸಿ,ಸ್ವಾಗತಿಸಿದರು. ಉಪನ್ಯಾಸಕ ಗಣೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಜ್ಞಾನದೀಪ ಸಂಸ್ಥೆಯ ಸಿಬಂದಿ ವರ್ಗದವರು ಸೇರಿದಂತೆ ಸಂಸ್ಥೆಯ ಬೆಳ್ಳಾರೆ ಮತ್ತು ಸುಳ್ಯದ ವಿದ್ಯಾರ್ಥಿಗಳು ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದರು.