ಬೆಳ್ಳಾರೆ: ಸುಳ್ಯ ಉಪವಿಭಾಗದ ಬೆಳ್ಳಾರೆಯ ಮೆಸ್ಕಾಂ ಶಾಖಾ ಕಚೇರಿಯನ್ನು ಮೇಲ್ದರ್ಜೆಗೇರಿಸಿ ಉಪ ವಿಭಾಗ (ನಿರ್ವಹಣೆ ಮತ್ತು ಪಾಲನೆ)ಕಚೇರಿಯನ್ನು ಮಂಜೂರು ಮಾಡಿ ಆರಂಭಿಸಲು ಬಳಕೆದಾರರ ವೇದಿಕೆ ಬೆಳ್ಳಾರೆ ಇದರ ಸಂಚಾಲಕ ಜಯಪ್ರಸಾದ್ ಜೋಶಿ ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತದ ಆಡಳಿತ ಕಚೇರಿಯಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭ ಮೆಸ್ಕಾಂ ಹಣಕಾಸು ನಿಯಂತ್ರಕರು ಮತ್ತು ಮುಖ್ಯ ಪ್ರಬಂಧಕರು ಕೂಡಾ ಉಪಸ್ಥಿತರಿದ್ದು ಮನವಿಗೆ ಪೂರಕ ಸ್ಪಂದನೆ ನೀಡಿದರು.
ಮನವಿಯಲ್ಲಿ ಬೆಳ್ಳಾರೆಯಲ್ಲಿ ಸೆಕ್ಷನ್ ಕಚೇರಿ 2003 ರಲ್ಲಿ ಆರಂಭವಾಗಿದ್ದು ಹಾಲಿ ಬೆಳ್ಳಾರೆಯ ಸೆಕ್ಷನ್ ಕಚೇರಿ ವ್ಯಾಪ್ತಿ ಅತೀ ದೊಡ್ಡದಾಗಿ ವಿಶಾಲವಾಗಿದ್ದು ಶಾಖಾ ಕಚೇರಿ ಮಾತ್ರದಿಂದ ಆಡಳಿತ ಮತ್ತು ನಿರ್ವಹಣೆ ಕಷ್ಟಕರವಾಗಿರುತ್ತದೆ. ಬೆಳ್ಳಾರೆಯಲ್ಲಿ ಉಪ ವಿಭಾಗ ಆರಂಭಿಸಿದಲ್ಲಿ ನಿರ್ವಹಣೆ ಸುಗಮವಾಗಿ ಗ್ರಾಹಕರ ಕುಂದು ಕೊರತೆಗಳ ನಿವಾರಣೆಯಾಗಿ ಆಡಳಿತ ದೃಷ್ಟಿಯಿಂದಲೂ ಬಹಳಷ್ಟು ಅನುಕೂಲವಾಗಲಿದೆ. ಪ್ರಸ್ಥಾವಿತ ಬೆಳ್ಳಾರೆ ಉಪ ವಿಭಾಗಕ್ಕೆ ಬೆಳ್ಳಾರೆ ಅಲ್ಲದೆ ಐವರ್ನಾಡು ಮತ್ತು ನಿಂತಿಕಲ್ ಶಾಖಾ ಕಚೇರಿಗಳನ್ನು ಸೃಜಿಸಿ ಬೆಳ್ಳಾರೆ ಉಪ ವಿಭಾಗ ಆರಂಭಿಸಿದಲ್ಲಿ ಎಲ್ಲಾ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ಈಗ ಬೆಳ್ಳಾರೆಗೆ ಹತ್ತಿರದ ಕಲ್ಮಡ್ಕ ಇತ್ಯಾದಿ ಗ್ರಾಮಗಳನ್ನು ಕೂಡಾ ದೂರದ ಸುಬ್ರಹ್ಮಣ್ಯಕ್ಕೆ ಸೇರಿಸಿದ್ದು ಅಲ್ಲಿನ ಗ್ರಾಹಕರೂ ಬೆಳ್ಳಾರೆ ವ್ಯಾಪ್ತಿಗೆ ಮರು ಸೇರ್ಪಡೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಬೆಳ್ಳಾರೆ ಉಪ ವಿಭಾಗ ಆರಂಭಿಸಿದಲ್ಲಿ ಈ ಸಮಸ್ಯೆಯೂ ಪರಿಹಾರವಾಗಲಿದೆ.
ಬೆಳ್ಳಾರೆಯಲ್ಲಿ 33/11 ವಿದ್ಯುತ್ ವಿತರಣ ಕೇಂದ್ರವೂ ಕಾರ್ಯಾಚರಿಸುತ್ತಿರುವುದಲ್ಲದೆ ಮಾಡಾವು 110/33 ಕೆ.ವಿ. ಕೇಂದ್ರವೂ ಆರಂಭವಾಗಲಿದ್ದು ಸುಗಮ ವಿದ್ಯುತ್ ವಿತರಣೆ ನಿಟ್ಟಿನಲ್ಲಿ ಬೆಳ್ಳಾರೆ ಬಹು ಪ್ರಾಮುಖ್ಯ ಕೇಂದ್ರವಾಗಲಿದೆ. ಆ ಕಾರಣದಲ್ಲೂ ಬೆಳ್ಳಾರೆಗೆ ಉಪ ವಿಭಾಗ ಕಚೇರಿ ಅತೀ ಅಗತ್ಯ. ಸುಳ್ಯ, ಕಡಬ, ಸುಬ್ರಹ್ಮಣ್ಯ, ಕುಂಬ್ರ ಉಪ ವಿಭಾಗಗಳಲ್ಲಿ ಒತ್ತಡ ಹೆಚ್ಚಿದ್ದು ಬೆಳ್ಳಾರೆ ಸಮೀಪದ ಅಲ್ಲಿನ ವ್ಯಾಪ್ತಿಗಳನ್ನು ಪ್ರಸ್ಥಾವಿತ ಬೆಳ್ಳಾರೆಗೆ ಸೇರಿಸಿದಲ್ಲಿ ಅಲ್ಲಿಯೂ ಹೊರೆ ಕಮ್ಮಿ ಆಗಿ ದಕ್ಷತೆ ಸುಧಾರಿಸುವುದಲ್ಲದೆ ಆಡಳಿತ ಮತ್ತು ನಿರ್ವಹಣೆ ಸುಗಮವಾಗಿ ಅನುಕೂಲಕರವಾಗಲಿದೆ.
ಹೀಗಾಗಿ ಮೆಸ್ಕಾಂ ಮತ್ತು ಗ್ರಾಹಕರ ಹಿತ ದೃಷ್ಟಿ ಹಾಗೂ ಭವಿಷ್ಯದ ಬೆಳವಣಿಗೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಾರೆಯ ಶಾಖಾ ಕಚೇರಿಯನ್ನು ಮೇಲ್ದರ್ಜೆಗೇರಿಸಿ, ಉಪ ವಿಭಾಗ (ನಿರ್ವಹಣೆ ಮತ್ತು ಪಾಲನೆ)ಕಚೇರಿಯನ್ನು ಆರಂಭಿಸಿ ಗ್ರಾಹಕ ಸ್ನೇಹಿ ವ್ಯವಸ್ಥೆ ಜಾರಿಗೊಳಿಸಬೇಕಾಗಿ ಮನವಿಯಲ್ಲಿ ತಿಳಿಸಲಾಗಿದೆ.