ಸುಳ್ಯ: ಮಂಗಗಳ ಕಾಟ ವಿಪರೀತವಾಗಿ ಕೃಷಿಕರು ಕಂಗಾಲಾಗಿದ್ದಾರೆ. ಸರಕಾರವು ಮಂಗನ ಪಾರ್ಕ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಗ್ರಾಮೀಣ ಭಾಗದ ಕೃಷಿಕರಿಗೆ ಸದ್ಯ ಮಂಗಗಳ ಕಾಟದಿಂದ ರಿಲೀಫ್ ಬೇಕಿದೆ. ಹೀಗಾಗಿ ಇನ್ನಿಲ್ಲದ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ ಕಾಸರಗೋಡು ಜಿಲ್ಲೆಯ ಕಿನ್ನಿಂಗಾರಿನ ರಾಜಗೋಪಾಲ ಕೈಪಂಗಳ ಅವರು ಹೊಸದೊಂದು ಪ್ರಯತ್ನ ಮಾಡಿದ್ದಾರೆ. ಈ ಸುಲಭ ಉಪಕರಣದ ಮೂಲಕ ಈಗಲೂ ಕೃಷಿ ಭೂಮಿಯಲ್ಲಿ ಈ ಬಗ್ಗೆ ಪರೀಕ್ಷೆ ಮಾಡುತ್ತಿದ್ದಾರೆ. ಇತರ ಕೃಷಿಕರೂ ಈ ಸುಲಭ ವಿಧಾನದಲ್ಲಿ ಪ್ರಯತ್ನ ಮಾಡಬಹುದಾಗಿದೆ. ಇದರ ವಿಡಿಯೋ ಇಲ್ಲಿದೆ:
ಈ ಸುಲಭ ಉಪಕರಣದಲ್ಲಿ ಕಾರು ಅಥವಾ ಬೈಕ್ ಟ್ಯೂಬ್ ಬಳಕೆ ಮಾಡಿಕೊಂಡು ಅದಕ್ಕೆ ಗಾಳಿ ತುಂಬಿ ಪ್ಯಾನ್ಸಿ ಅಂಗಡಿಯಲ್ಲಿ ದೊರೆಯುವ ಹಾರ್ನ್ ಮಾದರಿಯ ಆಟಿಕೆಗೆ ಪೈಪ್ ಮೂಲಕ ಗಾಳಿ ಹೋಗುವಂತೆ ಮಾಡಿ ಮಂಗಗಳ ಹಿಂಡು ಇರುವ ಕಡೆ ಈ ಸದ್ದು ಕೇಳಿಸುವುದು ಇಲ್ಲಿನ ಉಪಾಯ. ಎಲ್ಲಾ ಕೃಷಿಕರೂ ಈ ಪ್ರಯತ್ನ ಮಾಡಬಹುದು ಎನ್ನುತ್ತಾರೆ ರಾಜಗೋಪಾಲ್ ಅವರು.
ರಾಜಗೋಪಾಲ ಕೈಪಂಗಳ ಅವರು ಕೃಷಿಕರಿಗೆ ಉಪಯುಕ್ತವಾಗುವ ಇಂತಹ ಹಲವು ಉಪಕರಣ ಮಾಡಿದ್ದಾರೆ. ಅದರಲ್ಲಿ ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿ ತಡೆಗೆ ಸಿದ್ಧ ಮಾಡಿರುವ ಎಲ್ ಇ ಡಿ ಆಧಾರಿತ ಲೈಟ್ ಗಮನಸೆಳೆದಿದೆ. ಕೇರಳದ ಅರಣ್ಯ ಇಲಾಖೆ ಆನೆ ಹಾವಳಿ ತಡೆಗೆ ಈ ಲೈಟ್ ಉಪಯುಕ್ತವಾಗಿದೆ ಎಂದು ಹೇಳಿದೆ.
ಕೃಷಿಕನಾಗಿರುವುದರಿಂದ ಕೃಷಿಕರ ಸಂಕಷ್ಟ ಅರಿವಿದೆ. ಹೀಗಾಗಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ವಿವಿಧ ಪ್ರಯತ್ನ ಮಾಡುತ್ತಲೇ ಇದ್ದೇನೆ. ಇದು ಮಂಗಗಳನ್ನು ತೋಟದಿಂದ ಓಡಿಸಲು ಮಾಡಿರುವ ಒಂದು ಪ್ರಯತ್ನ. ಈಗ ಇದರ ಸಾಧಕ ಬಾಧಕಗಳ ಬಗ್ಗೆಯೂ ಗಮನಿಸಲಾಗುತ್ತಿದೆ. ಇತರ ಕೃಷಿಕರೂ ಈ ವಿಧಾನ ಮಾಡಿ ಪ್ರಯತ್ನ ಮಾಡಬಹುದು. – ರಾಜಗೋಪಾಲ ಕೈಪಂಗಳ
ರಾಜಗೋಪಾಲ್ ಕೈಪಂಗಳ ಅವರ ಸಂಪರ್ಕಕ್ಕೆ : 9061674679