ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ನನ್ನು 10 ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ವಹಿಸಿ 6ನೇ ಜೆ ಎಂ ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿಮಾನದಲ್ಲಿ ಸಜೀವ ಬಾಂಬ್ ಇಟ್ಟ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ತಾನೊಬ್ಬನೆ ಎಂದು ಆರೋಪಿ ಆದಿತ್ಯ ರಾವ್ ತನಿಖಾಧಿಕಾರಿಗಳ ವಿಚಾರಣೆ ವೇಳೆ ಇಂದು ಬಾಯ್ಬಿಟ್ಟಿದ್ದಾನೆ. ಹೀಗಾಗಿ ಇನ್ನಷ್ಟು ವಿಚಾರಣೆ ನಡೆಯುತ್ತಿದ್ದು ಈತ ಇನ್ನಷ್ಟು ಬಾಂಬ್ ತಯಾರಿಕೆ ಹಾಗೂ ಇತರ ಮಾಹಿತಿಗಳ ಬಗ್ಗೆ ಹಾಗೂ ಏಕೆ ಇಂತಹ ಕೃತ್ಯ ನಡೆಸಿದ್ದ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ಇಂಡಿಗೋ ವಿಮಾನ ಹೈದರಾಬಾದಿಗೆ ತೆರಳುತ್ತಿರುವ ಸಂದರ್ಭದಲ್ಲಿ ನಿಲ್ದಾಣದ ಅಧಿಕಾರಿಗಳಿಗೆ ಕರೆ ಮಾಡಿ ಬಾಂಬ್ ಇರಿಸಲಾಗಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಆರೋಪಿ ಆದಿತ್ಯ ವಿರುದ್ಧ ಇಂಡಿಗೋ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾದ ಬಳಿಕ ಆರೋಪಿ ಆದಿತ್ಯ ರಾವ್ ನನ್ನು ಮಂಗಳೂರಿಗೆ ವಿಮಾನದ ಮೂಲಕ ಕರೆತಂದು ವಿಚಾರಣೆ ನಡೆಸಲಾಯಿತು. ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷಾ ನೇತೃತ್ವದಲ್ಲಿ ಆರೋಪಿ ಆದಿತ್ಯ ರಾವ್ ನನ್ನು ತಡಾರಾತ್ರಿವರೆಗೆ ವಿಚಾರಣೆ ನಡೆಸಿದ ಬಳಿಕ ಜೆಎಮ್‍ಎಫ್‍ಸಿ 6ನೇ ಕೋರ್ಟ್ ನ್ಯಾಯಾಧೀಶ ಕಿಶೋರ್ ಕುಮಾರ್ ಕೆ.ಎನ್ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ 15 ದಿನ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದರು.ನ್ಯಾಯಾಧೀಶರು 10 ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ವಹಿಸಿ ಆದೇಶ ಹೊರಡಿಸಿದರು. ನ್ಯಾಯಾಲಯದಲ್ಲಿ ನಾನು ಮಾಡಿದ್ದೆಲ್ಲಾ ತಪ್ಪು ಎಂದು ಆದಿತ್ಯ ರಾವ್ ಒಪ್ಪಿಕೊಂಡಿದ್ದಾನೆ.
ತಾನೊಬ್ಬನೇ ಮಾಸ್ಟರ್ ಮೈಂಡ್ ಎಂದ ಆದಿತ್ಯ ರಾವ್:
ಮಂಗಳೂರಿನಲ್ಲಿ ಪೊಲೀಸರು ವಿಚಾರಣೆ ನಡೆಸುವ ವೇಳೆ ತಾನೊಬ್ಬನೇ ಈ ಕೃತ್ಯದ ಹಿಂದಿದ್ದು ಬೇರೆ ಯಾವುದೇ ಉದ್ದೇಶ ಇರಲಿಲ್ಲ, ತಾನು ಮಾಡಿದ್ದು ತಪ್ಪು ಎಂದು ಪದೇ ಪದೇ ಹೇಳಿದ್ದಾನೆ. ಬಾಂಬ್ ತಯಾರಿಕೆಯ ಬಗ್ಗೆ ಈತ ನಡೆಸಿರುವ ಶೊಧ, ಇಂಟರ್ನೆಟ್ ಮೂಲಕ ನಡೆಸಿದ ಶೋಧ ಹಾಗೂ ಚಾಕಚಕ್ಯತೆ ಬಗ್ಗೆ ತನಿಖಾಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಪ್ರಯೋಗಕ್ಕೆ ಸುಮಾರು ಬಗೆಯ ಸಾಮಾಗ್ರಿ ತರಿಸಿದ್ದಾನೆ ಎನ್ನಲಾಗಿದೆ.ತನಿಖೆಯ ವೇಳೆ ಮಾನಸಿಕವಾಗಿಯೂ ದೃಢವಾಗಿರದೇ ಇರುವ ಕಾರಣದಿಂದ ಆದಿತ್ಯ ರಾವ್ ಮಾನಸಿಕ ಸ್ಥಿತಿಗತಿ ಬಗ್ಗೆಯೂ ವೈದ್ಯರಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಬೆದರಿಕೆ ಮತ್ತು ವಿಧ್ವಂಸಕ ಕೃತ್ಯ – ಕೇಸು ದಾಖಲು:
ಈ ಪ್ರಕರಣವನ್ನು ರಾಷ್ಟ್ರೀಯ ಬೆದರಿಕೆ ಮತ್ತು ವಿಧ್ವಂಸಕ ಕೃತ್ಯವೆಂದು ಪರಿಗಣಿಸಿ, ಆರೋಪಿ ಆದಿತ್ಯ ರಾವ್ ವಿರುದ್ಧ ಕಾನೂನುಬಾಹಿರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಕೇಸ್ ದಾಖಲಿಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ|ಪಿಎಸ್ ಹರ್ಷಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಪಿ ಆದಿತ್ಯ ರಾವ್ ಈ ಹಿಂದೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿ ಜೈಲು ಸೇರಿದ್ದ ವೇಳೆಯೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲು ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದಿದೆ ಎಂದು ಘಟನೆಯನ್ನು ವಿವರಿಸಿದ ಹರ್ಷಾ ಆರೋಪಿ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿ ಚಿಕ್ಕಬಳ್ಳಾಪುರ ಜೈಲು ಪಾಲಾಗಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡುವ ಸಂಚು ರೂಪಿಸಿದ್ದ. ಇದಕ್ಕಾಗಿ ವಿವಿಧ ವೆಬ್ ಸೈಟ್ಗ, ಯೂಟೂಬ್ ನೋಡುತ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ ಎಂದು ವಿವರಿಸಿದರು.