ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ನ.12 ರಂದು ನಡೆದ ಚುನಾವಣೆಯಲ್ಲಿ ಶೆ.59.67 ಮತದಾನವಾಗಿದೆ. 3,94,894 ಮತದಾರರ ಪೈಕಿ 2,35,628 ಮಂದಿ ಮತ ಚಲಾಯಿಸಿದ್ದಾರೆ. ಮತದಾನ ಶಾಂತಿಯುತವಾಗಿ ನಡೆಯಿತು.
ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ನಗರದ ಲೇಡಿಹಿಲ್ ಚರ್ಚ್ ಸಮೀಪದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಚಲಾಯಿಸಿದರು. ಮತದಾನಕ್ಕಾಗಿ 448 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿತ್ತು. 27 ಮಂದಿ ಪಕ್ಷೇತರರ ಸಹಿತ 60 ವಾರ್ಡ್‌ಗಳಲ್ಲಿ 180 ಸ್ಪರ್ಧಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ನ.14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಶಾಂತಿಯುತ ಮತದಾನ: ಡಿಸಿ ಕೃತಜ್ಞತೆ : ಮಂಗಳೂರು ಮಹಾನಗರಪಾಲಿಕೆಗೆ ಯಾವುದೇ ಗೊಂದಲಗಳಿಲ್ಲದೇ, ಶಾಂತಿಯುತವಾಗಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ಸಹಕರಿಸಿದ ಮತದಾರರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಸಿಂಧೂ ಬಿ. ರೂಪೇಶ್ ಕೃತಜ್ಞತೆ ಸಲ್ಲಿಸಿದ್ದಾರೆ. ಚುನಾವಣಾ ಸಿದ್ಧತೆಗಳಿಗೆ ಕಾಲಾವಕಾಶ ಕಡಿಮೆ ಇದ್ದರೂ, ಯಾವುದೇ ಲೋಪಗಳಿಲ್ಲದೆ ಚುನಾವಣೆ ನಡೆದಿದೆ. ಇದಕ್ಕಾಗಿ ತೊಡಗಿಸಿಕೊಂಡ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ, ಪೊಲೀಸರಿಗೆ ಧನ್ಯವಾದ ಸಲ್ಲಿಸಿರುವ ಅವರು, ಚುನಾವಣೆ ಸುಗಮವಾಗಲು ಸಹಕರಿಸಿದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೂ ಕೃತಜ್ಞತೆ ತಿಳಿಸಿದ್ದಾರೆ.