ಸುಳ್ಯ: ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ನಡೆಯಲಿದೆಯೇ.? ಹೀಗೊಂದು ಸಾಧ್ಯತೆಗಳ ಬಗ್ಗೆ ಈಗ ಚರ್ಚೆ ನಡೆಯುತಿದ್ದು ನಿರೀಕ್ಷೆ ಗರಿಗೆದರಿದೆ.
ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ನಡೆಸಲು ಕೆಲವೊಂದು ಮಾನದಂಡಗಳನ್ನು ಸರಕಾರ ನಿಗದಿ ಪಡಿಸಿದೆ. ಈ ಮಾನದಂಡ ಪ್ರಕಾರ ಗ್ರಾಮ ವಾಸ್ತವ್ಯ ನಡೆಸಬಹುದಾದ ಸಾಧ್ಯತಾ ಪಟ್ಟಿಯಲ್ಲಿ ಸುಳ್ಯ ತಾಲೂಕಿನ ಮಡಪ್ಪಾಡಿ ಸೇರಿ ಜಿಲ್ಲೆಯ ಎರಡು ಗ್ರಾಮಗಳು ಸೇರಲಿದೆ ಎಂದು ಹೇಳಲಾಗಿದೆ.
ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮಕ್ಕೆ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಮಾನದಂಡ ಪ್ರಕಾರ ಸಾಧ್ಯತೆ ಇದ್ದಲ್ಲಿ ಸುಳ್ಯ ತಾಲೂಕಿಗೆ ಮುಖ್ಯಮಂತ್ರಿಗಳನ್ನು ಕರೆ ತರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದ್ದಾರೆ.
ಒಟ್ಟಿನಲ್ಲಿ ಸುಳ್ಯ ತಾಲೂಕಿಗೆ ಸಿಎಂ ಗ್ರಾಮ ವಾಸ್ತವ್ಯ ಭಾಗ್ಯ ಒದಗಿ ಬಂದಲ್ಲಿ ಹೊಸತೊಂದು ದಾಖಲೆ ನಿರ್ಮಾಣವಾಗಲಿದೆ.
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರ್ ಸರಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ನಡೆಸುವಂತೆ ಸುಳ್ಯದ ವಕೀಲ ಧರ್ಮಪಾಲ ಕೊಯಿಂಗಾಜೆ ಇತ್ತೀಚೆಗೆ ಟ್ವಿಟ್ಟರ್ ಮೂಲಕ ಆಹ್ವಾನ ನೀಡಿ ಸಿಎಂ ಗಮನ ಸೆಳೆಯುವ ಪ್ರಯತ್ನವನ್ನು ಇತ್ತೀಚೆಗೆ ನಡೆಸಿದ್ದರು.