ಮಡಿಕೇರಿ: ಚೇರಂಬಾಣೆ-ಬೆಟ್ಟತ್ತೂರು-ಮದೆನಾಡು ರಸ್ತೆಯಲ್ಲಿ ಕೇರಳ ಮೂಲದ ವ್ಯಕ್ತಿಗಳು ಭಾರೀ ಗಾತ್ರದ ವಾಹನಗಳಲ್ಲಿ ಮರದ ನಾಟಾಗಳನ್ನು ಸಾಗಿಸುತ್ತಿರುವುದರಿಂದ ರಸ್ತೆಗಳು ಹದಗೆಟ್ಟಿದ್ದು, ಜಿಲ್ಲಾಡಳಿತ ಈ ಮಾರ್ಗದಲ್ಲಿ ಟಿಂಬರ್ ಸಾಗಾಟಕ್ಕೆ ಅವಕಾಶ ನೀಡಬಾರದೆಂದು ಬೆಟ್ಟತ್ತೂರು ನಿವಾಸಿ, ಮಾಜಿ ಯೋಧ ಕಡ್ಯದ ಎಸ್.ಸುಬ್ಬಯ್ಯ ಒತ್ತಾಯಿಸಿದ್ದಾರೆ.ಸಮಸ್ಯೆಯ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ಸಲುವಾಗಿ ಮೇ.31 ರಂದು ಐದು ಗ್ರಾಮಗಳ ಗ್ರಾಮಸ್ಥರು ಕಾವೇರಿಸೇನೆ ಸಹಕಾರದೊಂದಿಗೆ ಕೊಳಗದಾಳು ಗ್ರಾಮ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ-ಭಾಗಮಂಡಲ ರಾಜ್ಯ ಹೆದ್ದಾರಿಯ ಚೇರಂಬಾಣೆಯಿಂದ ಕೊಟ್ಟೂರು, ಕೊಳಗದಾಳು, ಬೆಟ್ಟತ್ತೂರು, ಮದೆನಾಡು ಮೂಲಕ ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸುಮಾರು 18ಕಿ.ಮೀ ಉದ್ದದ ರಸ್ತೆ ನಬಾರ್ಡ್ ಯೋಜನೆಯಡಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಪ್ರಸಕ್ತ ಜಿಲ್ಲಾ ಪಂಚಾಯತ್ ಅಧೀನದಲ್ಲಿದೆ. ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಿಲುಕಿದ ಜೋಡುಪಾಲ, ಕಾಟಕೇರಿ, ಮದೆನಾಡು, ಬೆಟ್ಟತ್ತೂರು ಗ್ರಾಮಗಳ ಸಂತ್ರಸ್ತರನ್ನು ಚೇರಂಬಾಣೆಯ ಸಂತ್ರಸ್ತರ ಕೇಂದ್ರಕ್ಕೆ ಸಾಗಿಸಲು ಇದೇ ರಸ್ತೆಯನ್ನು ಬಳಸಲಾಗಿದೆ. ಇದು ಮಂಗಳೂರು ರಸ್ತೆ ಹಾಗೂ ಭಾಗಮಂಡಲ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೂ ಆಗಿದೆ ಎಂದು ವಿವರಿಸಿದರು.
ಈ ರಸ್ತೆಯಲ್ಲಿ ಚೇರಂಬಾಣೆಯಿಂದ 6-7 ಕಿ.ಮೀ ದೂರದಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ಕೇರಳ ಮೂಲದವರಿಗೆ ಸೇರಿದ ಸುಮಾರು 40ಎಕರೆ ಕಾಫಿ ತೋಟವಿದ್ದು, ಭಾರೀ ಗಾತ್ರದ ನೂರಾರು ಬಳಂಜಿ ಮರಗಳನ್ನು ಕಡಿಯಲಾಗಿದೆ. ಈ ಮರಗಳನ್ನು ಭಾರೀ ವಾಹನ ಹಾಗೂ ಕ್ರೇನ್‍ಗಳ ಮೂಲಕ ಇದೇ ರಸ್ತೆಯಲ್ಲಿ ಸಾಗಿಸಲಾಗುತ್ತಿದ್ದು, ಇದರಿಂದಾಗಿ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಇದರಿಂದಾಗಿ ಈ ಭಾಗದ ಸುಮಾರು 5 ಗ್ರಾಮಗಳ ಗ್ರಾಮಸ್ಥರು ಸಣ್ಣ ವಾಹನಗಳನ್ನು ಚಾಲಿಸಲು ಮತ್ತು ಕಾಲ್ನಡಿಗೆಯಲ್ಲಿ ಸಾಗಲು ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆದಿರುವುದಾಗಿ ತಿಳಿಸಿದರು.
ಮೇ 31ರಂದು ಬೆಳಗ್ಗೆ 10 ಗಂಟೆಯಿಂದ ಸುಮಾರು 3 ಗಂಟೆಗಳ ಕಾಲ ಗ್ರಾಮದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಸುಬ್ಬಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾವೇರಿಸೇನೆ ಸಂಚಾಲಕ ಕೆ.ಎ.ರವಿಚಂಗಪ್ಪ ಉಪಸ್ಥಿತರಿದ್ದರು.