ಮಳೆ ಬಂತು ದಾಸ್ತಾನು ಅಡಿಕೆ ಜಾಗ್ರತೆ

June 12, 2019
11:00 AM

ನೈಋತ್ಯ ಮುಂಗಾರು ಈ ಲೇಖನ ಬರೆಯುವ ಹೊತ್ತಿಗೆ ಕೇರಳ ಪ್ರವೇಶಿಸಿ ಆಗಿದೆ. ಕೆಲವೇ ಘಂಟೆಗಳಲ್ಲಿ ಅದು ನಮ್ಮ ಕರಾವಳಿಗೆ ತಂಪೆರೆಯಬಹುದು. ಬಿಸಿಲಿನ ಬೇಗೆಗೆ ಬಾಡಿ ಬೆಂಡಾದ ಗಿಡ ಮರಗಳು ಮತ್ತೆ ಹಸಿರು ಹೊದ್ದು ಮೆರೆಯುವ ಹುಮ್ಮಸ್ಸಲ್ಲಿರಬಹುದು. ಆ ಮಳೆ ಬಂದು ನದಿ ತೊರೆಗಳು ತುಂಬಿ ಹರಿಯುವ ದೃಶ್ಯ ಕಾಣಲು ಅದೆಷ್ಟೊ ಮೈಮನಗಳು ಕಾದುಕುಳಿತಿರಬಹುದು. ಕೃಷಿಕನೂ ಅದರಲ್ಲಿ ಸೇರಿದವನೆ. ತರಕಾರಿ ಕೃಷಿ ಮಳೆಗಾಲದ್ದು ಸರಿಯಾಗಿ ತೊಡಗುವುದು ಮಳೆಗೆ ನೆಲ ಒದ್ದೆಯಾದರೆ ಮಾತ್ರ. ಈಗ ಬಿತ್ತಿ ಮೊಳಕೆಯೊಡೆದರೂ ಅದಕ್ಕೆ ಚೈತನ್ಯ ತುಂಬುವುದು ಮಿಂಚು ಗುಡುಗುಗಳ ಸದ್ದಿನೊಂದಿಗೆ ಸುರಿದುಬರುವ ಮಳೆರಾಯನಿಂದಲೆ. ಮಳೆ ಬರುವ ಮೊದಲೆ ಕೃಷಿಕ ಅದಕ್ಕೆ ತಯಾರಾಗುವುದು ಹಿಂದಿನಿಂದಲೆ ಬೆಳೆದು ಬಂದ ಕ್ರಮ. ತೋಟದ ಉಜಿರುಕಣಿಗಳು, ಮಳೆನೀರಿನ ಕಣಿಗಳು, ಕೆರೆಯ ತೂಬು, ಹೊಳೆಗಿಳಿಸಿದ ಪೈಪು ಇಂತಹ ಹಲವಾರು ಮಳೆ ಪೂರ್ವದ ಕೆಲಸಗಳಿರುತ್ತವೆ. ಇದು ತೋಟದಲ್ಲಿಯಾದರೆ ಅಂಗಳವನ್ನು ಹುಲ್ಲುಬೆಳೆಯದಂತೆ ರಕ್ಷಿಸಲು ಮುಚ್ಚಿಗೆ ಹಾಸುವುದು, ಅಂಗಳದಲ್ಲಿ ನೀರು ನಿಲ್ಲದಂತೆ ಕಣಿಗಳ ಮಣ್ಣು ಎತ್ತಿ ಹಾಕುವುದು, ಮಾಡಿನ ನೀರು ಬಿದ್ದು ಅಂಗಳ ತೂತು ಬೀಲದಂತೆ ಮುಂಜಾಗ್ರತೆ ಹೀಗೆ ಅಂಗಳದಲ್ಲೂ ಕೃಷಿಕನಿಗೆ ಮಳೆ ಪೂರ್ವ ತಯಾರಿ ಇದ್ದೇ ಇದೆ. ಬಹಳ ಮನೆಗಳಲ್ಲಿ ಇದೆಲ್ಲವೂ ಆಗಿರಬಹುದು. ಉಳಿದೆಡೆ ಒಂದಷ್ಟು ಗಮನ ಕೊಡುವುದು ಮಾಡಿದರಾಯಿತು. ಇದೆಲ್ಲವುಗಳಿಗಿಂತ ಬಹಲ ಮುಖ್ಯವಾದ ಕೆಲಸ ಅಡಿಕೆ ಕೃಷಿಕನಿಗೆ ಮನೆಯ ಒಳಗೇ ಇದೆ. ಅದು ಅಡಿಕೆ ದಾಸ್ತಾನು ಮಾಡುವ ಕೆಲಸ.

Advertisement
Advertisement

ಬಹಳಷ್ಟು ಜನ ಕೃಷಿಕರು ಅಡಿಕೆ ಅಂಗಳದಲ್ಲಿ ಒಣಗಿದ ನಂತರ ತೆಗೆದ ಕೂಡಲೆ ದಾಸ್ತಾನು ಕೋಣೆಗೆ ಸಾಗಿಸಿಬಿಡುತ್ತಾರೆ. ಆದರೆ ಕೆಲವೆಡೆ ಈಗ ಕೃಷಿಕರ ಮನೆ ಎಂದರೆ ವೃದ್ಧಾಶ್ರಮ ಆಗಿದೆ ತಾನೆ, ಹಾಗಾಗಿ ಅವರಿಂದ ಹಿಂದಿನ ಹಾಗೆ ಕೆಲಸ ಮಾಡಲು ಆಗುತ್ತಿಲ್ಲ, ಕಾರ್ಮಿಕರ ಸಹಾಯ ಯಾವಾಗಲೂ ಗ್ರಹಿಸಿದ ಹಾಗೆ ಸಿಗುತ್ತಿಲ್ಲ. ಕಾರ್ಮಿಕರು ಮಾಡಿದ್ದರೂ ಅದು ನಾವು ಮಾಡಿದಷ್ಟು ನಾಜೂಕು ಆಗಲ್ಲ ಎಂಬುದು ತಿಳಿದದ್ದೇ. ಇಂತಹ ಮನೆಗಳಲ್ಲಿ ಮತ್ತೆ ಪತ್ತಾಯಕ್ಕೆ ಹಾಕುವಷ್ಟು ಉತ್ತಮ ಗುಣಮಟ್ಟ ಇಲ್ಲದ ಅಡಿಕೆಗಳಿದ್ದಲ್ಲಿ ಅದು ಗಾಳಿಗೆ ತೆರೆದಿದ್ದರೆ ಮಳೆಯ ಹವೆಗೆ ಹಾಳಾಗುವ ಅಪಾಯ ಇದೆ. ಪತ್ತಾಯದ ಬಾಗಿಲು ಸರಿಯಾಗಿ ಮುಚ್ಚಿದೆಯೊ ಎಂದು ಪರಿಶೀಲಿಸುವುದು, ಕೆಲವೊಮ್ಮೆ ಗಾಳಿಯಾಡುವಷ್ಟು ಸಂದು ಕಾಣುವುದಿದ್ದಲ್ಲಿ ಅದಕ್ಕೆ ಪೇಪರಿಟ್ಟು ಮುಚ್ಚುವುದು ಮುಂತಾದ ಕೆಲಸಗಳಿರುತ್ತವೆ.

Advertisement

ಕಡಿಮೆ ಗುಣಮಟ್ಟದ ಅಡಿಕೆ ಎಂದರೆ ಪತ್ತಾಯಕ್ಕೆ ಸೇರುವ ಗುಣಮಟ್ಟದ ಅಡಿಕೆ ಆಗಿರದಿದ್ದಲ್ಲಿ ಅಂತಹ ಅಡಿಕೆಯನ್ನು ಕೂಡ ನಿರ್ಲಕ್ಷ್ಯ ಮಾಡಬಾರದು. ಯಾಕೆಂದರೆ ಕಳೆದ ಬೇಸಿಗೆಯಲ್ಲಿ ನಮ್ಮ ಕೃಷಿಕರ ಅಂಗಳ ಸೇರಿದ ಫಸಲು ಪ್ರಮಾಣದಲ್ಲಿ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಕಡೆ ಕೊಡಿಯ ಅಡಿಕೆಗಳೆಲ್ಲವೂ ಅತ್ಯಂತ ಅಗತ್ಯದ್ದೆ. ಇಂತಹ ಅಡಿಕೆಗಳನ್ನು ಕೂಡ ಜೋಪಾನವಾಗಿ ತೆಗೆದಿಡುವುದು ಅಥವ ಈಗಲೆ ಸುಲಿಸಿ ಮಾರಾಟ ಮಾಡುವುದು. ಈ ಎರಡಲ್ಲಿ ಒಂದನ್ನಾದರೂ ಮಾಡಿದರೆ ಒಳ್ಳೆಯದು. ಮಳೆ ಆರಂಭವಾಗಿ ಒಂದು ವಾರದಲ್ಲಿ ಮನೆಯೊಳಗೆ ಇದ್ದರೂ ಅದನ್ನು ಕೋಣೆಯಲ್ಲಿ ಜೋಪಾನಮಾಡದಿದ್ದರೆ ಬೂಸರು ಬಂದು ಅಡಿಕೆ ಗುಣಮಟ್ಟ ಕಳೆದುಕೊಳ್ಳುತ್ತದೆ. ಜೋಪಾನ ಮಾಡಿದ ಮಾಳಿಗೆಯ ಹಂಚಿನ ಮಾಡಾದಲ್ಲಿ ಮಾಡು ಸೋರದಂತೆ ನಿಗಾ ವಹಿಸುವುದು, ಇಲಿಗಳು ಚೀಲವನ್ನು ತೂತುಮಾಡಿ ಅಡಿಕೆ ಸೋರದಂತೆ ನೋಡುವುದು ಮುಂತಾದ ನೋಡಬೇಕಾದ ಅನೇಕ ಸಂಗತಿಗಳಿವೆ.

ಇನ್ನೂ ಒಂದು ಸಂಗತಿ ಇದೆ. ನಮ್ಮಲ್ಲಿ ಬಹುತೇಕ ಕೃಷಿಕರ ತೋಟಕ್ಕೆ ಧಾರಾಳ ಅಂತ ನೀರಾವರಿಗೆ ನೀರಿರಲಿಲ್ಲ. ಸಾಕಷ್ಟು ಅಡಿಕೆ ಮರಗಳು ಬಿಸಿಲಿನ ತಾಪ ಸಹಿಸದೆ ಸೊರಗಿವೆ. ಅಂತಹ ಮರಗಳ ಹಿಂಗಾರಗಳು ಒಣಗಿ ಹೋಗಿವೆ. ನಳ್ಳಿ ಈಗಲೆ ಬೀಳುತ್ತಿವೆ. ಇನ್ನು ಮಳೆ ಬಂದ ಮೇಲೆ ಬೀಳುವ ನಳ್ಳಿಗಳ ಪ್ರಮಾಣ ದೊಡ್ಡದಿರಬಹುದು. ಅಂತು ಇಂತು ಮುಂದಿನ ಫಸಲು ಕೂಡ ಈ ವರ್ಷದಂತೆ ಅರ್ಧಕ್ಕರ್ಧ ಎಂಬ ಭಯ ಎಲ್ಲರಲ್ಲಿದೆ. ಆದ್ದರಿಂದ ಕೈಗೆ ಬಂದ ಹಿಂದಿನ ಫಸಲನ್ನು ಉದಾಸೀನ ಮಾಡದೆ ಜೋಪಾನವಾಗಿ ಕಾಪಾಡುವುದು ಅಗತ್ಯ ಕೂಡ.

Advertisement

ಅಡಿಕೆಯ ಜೊತೆಗೆ ಬೇಸಿಗೆಯಲ್ಲಿ ಮಾರಾಟಮಾಡಿ ಉಳಿದ ರಬ್ಬರ್ ಹಾಳೆಗಳು, ಕಾಳುಮೆಣಸಿನ ಚೀಲಗಳು, ಜಾಯಿಕಾಯಿ ಮತ್ತು ಪತ್ರೆಯ ದಸ್ತಾನು ವ್ಯವಸ್ಥೆಗಳನ್ನು ಕೂಡ ಗಮನಿಸಿದರೆ ಒಳ್ಳೆಯದು. ಕೆಲವು ಕಡೆ ಮಳೆಗಾಲದಲ್ಲಿ ಮಾರಾಟಮಾಡಲು ಗೇರುಬೀಜ ದಾಸ್ತಾನು ಮಾಡುತ್ತಾರೆ. ಹಿಂದೆಲ್ಲ ಅದನ್ನು ಸರಿಯಾಗಿ ಬಿಸಿಲಿಗೆ ಹಾಕಿ ತೆಗೆದಿರಿಸಲು ಕೈಗೆ ಕಾಲಿಗೆ ಜನವಿದ್ದ ಕಾಲದಲ್ಲಿ ಮುಟ್ಟಬೇಕಾದ ಜಾಗಕ್ಕೆ ಮುಟ್ಟುತ್ತಿತ್ತು. ಈಗ ಅದೆಲ್ಲ ಗ್ರಹಿಸಿದಂತೆ ಕೆಲಸ ಸಾಗದ ಕಾಲ. ಒಮ್ಮೆ ಗಮನಿಸಿದರೆ ನಮ್ಮ ಆದಾಯದ ಭಂಡಾರ ಉಳಿದುಕೊಳ್ಳಬಹುದು. ನಮ್ಮ ಜಾಗ್ರತೆ ನಮಗಿರಲಿ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror