ಗುತ್ತಿಗಾರು: ಮಳೆನೀರನ್ನು ಬಾವಿಗೆ ಬಿಡುವ ಮೂಲಕ ಬತ್ತಿ ಹೋಗುವ ಬಾವಿಯನ್ನು ಮತ್ತೆ ಜೀವ ಮಾಡಿರುವ ಯಶೋಗಾಥೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಏರಣಗುಡ್ಡೆ ಬಳಿಯ ಮಲ್ಕಜೆಯ ಬಿಟ್ಟಿ ನೆಡುನೀಲಂ ಅವರದು.
ಕಳೆದ ಕೆಲವು ವರ್ಷಗಳಿಂದ ಅವರು ಮಳೆಕೊಯ್ಲು ಮಾಡುತ್ತಿದ್ದಾರೆ. ಯಾವುದೇ ದೊಡ್ಡ ಸಾಧನಗಳು ಇಲ್ಲದೆ, ತಮ್ಮ ಮನೆಯಲ್ಲೇ ಇರುವ ಸಾಮಾಗ್ರಿ ಬಳಸಿ ಮಳೆನೀರನ್ನು ಸೋಸಿ ಬಾವಿಗೆ ಬಿಡುತ್ತಿದ್ದಾರೆ. ಇದೀಗ ಬಾವಿಯಲ್ಲಿ ನೀರು ಉಳಿದಿದೆ. ಕಳೆದ 2 ವರ್ಷಗಳಲ್ಲಿ ಬಿಟ್ಟಿ ನೆಡುನೀಲಂ ಅವರ ಈ ಯಶೋಗಾಥೆಯನ್ನು ವಿವಿಧ ಮಾಧ್ಯಮಗಳು ಫೋಕಸ್ ಮಾಡಿತ್ತು. ಮನೆಯ ಟೆರೇಸ್, ಛಾವಣಿ ನೀರನ್ನು 200 ಲೀಟರ್ ಬ್ಯಾರೆಲ್ ಮೂಲಕ ಸೋಸುವಂತೆ ಮಾಡಿ ಶುದ್ಧವಾದ ಬಳಿಕ ಬಾವಿಗೆ ಬಿಡುತ್ತಿದ್ದಾರೆ. ಹಿಂದೆಲ್ಲಾ ಸುಮಾರು ಮಾರ್ಚ್-ಎಪ್ರಿಲ್ ವೇಳೆಗೆ ಬಾವಿಯಲ್ಲಿ ನೀರು ಬರಿದಾಗುತ್ತಿತ್ತು. ಮಳೆಕೊಯ್ಲು ಮಾಡಿದ ಬಳಿಕ ನೀರು ಬತ್ತುವುದಕ್ಕೆ ತಡೆಯಾಗಿದೆ. ಅಲ್ಲದೆ ಬಾವಿಗಿಂತ ಕೆಳಗಿನ ಭಾಗದ ಕೆರೆಯಲ್ಲೂ ನೀರು ಹೆಚ್ಚಾಗಿದೆ ಎನ್ನುತ್ತಾರೆ ಬಿಟ್ಟಿ ನೆಡುನೀಲಂ. ಬ್ಯಾರೆಲ್ ಒಳಗಡೆ ಜಲ್ಲಿ , ಮಸಿ ಹಾಗೂ ಮರಳನ್ನು ಹಾಕಿ ನೀರು ಸೋಸುವಂತೆ ಮಾಡಿ ಬಾವಿಗೆ ಬಿಡುತ್ತಾರೆ. ಮಳೆಗಾಲ ಪೂರ್ತಿ ಈ ರೀತಿಯಾಗಿ ಬಾವಿಗೆ ನೀರು ಇಂಗುತ್ತದೆ. ಈ ಮಾದರಿಯನ್ನು ಎಲ್ಲಾ ಮನೆಗಳಲ್ಲೂ ಮಾಡಬಹುದಾಗಿದೆ.
ನಿಮಗೆ ತಿಳಿದಿರುವ ಮಳೆ ಕೊಯ್ಲು , ಜಲಸಂರಕ್ಷಣೆಯ ಸುಲಭ ಉಪಾಯಗಳನ್ನು , ಕೃಷಿಕರ ಮಾದರಿಗಳನ್ನು , ಸಣ್ಣ ಖರ್ಚಿನಲ್ಲಿ ಮಾಡಬಹುದಾದ , ಮಾಡಿರುವ ಉದಾಹರಣೆಗಳು, ಯಾವುದೇ ಉಪಕರಣಗಳು ಇಲ್ಲದೆ ಮಾಡಬಹುದಾದ ಪ್ರಯತ್ನಗಳು ಇದ್ದರೆ ನಮಗೆ ಇಮೈಲ್ ಅಥವಾ ವ್ಯಾಟ್ಸಪ್ ಮಾಡಿ ( sullianews@gmail.com ಅಥವಾ 9449125447 ) ತಿಳಿಸಿ. ನಾವು ಸಮಾಜಕ್ಕೆ ತಿಳಿಸುತ್ತೇವೆ.