ಮುಂಬೈ: ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ತೀವ್ರ ಬದಲಾವಣೆ ಕಾಣುತ್ತಿದ್ದು , ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜಿನಾಮೆ ನೀಡಿದ್ದಾರೆ. ಫಡ್ನವಿಸ್ ಸುದ್ದಿಗೋಷ್ಠಿಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಶನಿವಾರ ರಾತೋರಾತ್ರಿ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಿದ್ದ ಬಿಜೆಪಿಗೆ ಸುಪ್ರೀಂಕೋರ್ಟ್ ಬುಧವಾರವೇ ಬಹುಮತ ಸಾಬೀತುಪಡಿಸಲು ಆದೇಶಿಸಿತ್ತು. ಬಹುಮತ ಸಾಬೀತಿಗೆ ಮೊದಲೇ ಮುಖ್ಯಮಂತ್ರಿ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ಆದರೆ ನಾವು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸಿದ್ದರಿಂದ ಕೆಲವು ಸೀಟುಗಳ ಕೊರತೆ ಉಂಟಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದ್ದರೆ ಅದರ ಕಥೆ ಬೇರೆನೇ ಇರುತ್ತಿತ್ತು. ಫಲಿತಾಂಶದ ಬಳಿಕ ಶಿವಸೇನೆ ಅಧಿಕಾರ ಹಂಚಿಕೆಯ ಪ್ರಸ್ತಾಪ ಮಾಡಿತು. ಆದರೆ ಯಾವತ್ತೂ ಶಿವಸೇನೆಗೆ ಅಂತಹ ಭರವಸೆಯನ್ನು ನಾವು ನೀಡಿರಲಿಲ್ಲ ಎಂದು ಹೇಳಿದರು.
ನಾವು ಅಜಿತ್ ಪವಾರ್ ಬೆಂಬಲ ನೀಡಿದ್ದನ್ನು ನೋಡಿ ಇಡೀ ಎನ್ಸಿಪಿ ಪಕ್ಷ ನಮ್ಮೊಂದಿಗೆ ಇದೆ ಎಂದು ಭಾವಿಸಿದೆವು. ಆದರೆ ಹಾಗಾಗಲಿಲ್ಲ. ನಮಗೆ ಸಂಖ್ಯೆಯ ಕೊರತೆ ಇದೆ. ನಾನು ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎನ್ಸಿಪಿ-ಕಾಂಗ್ರೆಸ್-ಶಿವಸೇನೆ ಮೈತ್ರಿ ಸರ್ಕಾರ ರಚನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಎನ್ಸಿಪಿಯ ಅಜಿತ್ ಪವಾರ್ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ರಾತ್ರೋರಾತ್ರಿ ಸರ್ಕಾರ ರಚನೆಗೆ ಆಹ್ವಾನ ನೀಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಎನ್ಸಿಪಿ-ಕಾಂಗ್ರೆಸ್-ಶಿವಸೇನೆ ಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಎರಡು ದಿನಗಳ ವಿಚಾರಣೆಯ ಬಳಿಕ, ನ.27 ಸಂಜೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಮಹಾ ಸರ್ಕಾರಕ್ಕೆ ಸುಪ್ರೀಂ ಆದೇಶ ನೀಡಿತ್ತು. ಸುಪ್ರೀಂ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸಿಎಂ ಸ್ಥಾನಕ್ಕೆ ಫಡ್ನವೀಸ್ ರಾಜಿನಾಮೆ ನೀಡುವುದರೊಂದಿಗೆ ಸರಕಾರ ಪತನವಾಗಿದೆ.