ಸುಳ್ಯ: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಎನ್ ಸಿ ಪಿ ಮುಖಂಡ ಅಜಿತ್ ಪವಾರ್ ಒಪ್ಪಂದದೊಂದಿಗೆ ರಚನೆಯಾದ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ನೀಡುವ ಮೂಲಕ ಸರಕಾರ ಪತನವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗೆ ಸಾರ್ವಜನಿಕರು ವ್ಯಂಗ್ಯ ಮಾಡುತ್ತಿದ್ದು , ಸಿದ್ಧಾಂತ ಪಕ್ಷದಲ್ಲಿ ಹೀಗೇಕೆ ಎಂಬ ವ್ಯಂಗ್ಯ ಕಾಣುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಬಿಜೆಪಿಗೆ, ಬಿಜೆಪಿ ಸಿದ್ಧಾಂತಗಳನ್ನು ವ್ಯಂಗ್ಯ ಮಾಡುವ ಸ್ಥಿತಿಯಾಗಿದೆ. ಅದರಲ್ಲಿ, ಬಿಜೆಪಿ ಜೊತೆ ಸಖ್ಯ ಮಾಡಿದ ಬಳಿಕ ಈಗ ನೀರಾವರಿ ಹಗರಣ ಕೇಸಿನಲ್ಲಿ ಒಂದೇ ದಿನದಲ್ಲಿ ಪರಿಶುದ್ಧರಾಗಿ ಹೊರಬಂದಿರುವ ಅಜಿತ್ ಪವಾರ್ ಪರಮ ಪವಿತ್ರರಾಗಿಯೇ ಉಳಿಯುವರೇ? ಎಂಬ ಪ್ರಶ್ನೆಯೊಂದು ಶೇರ್ ಆದರೆ, ಅಧಿಕಾರಕ್ಕೆ ಅಂಟಿ ಕೂರದ ಆದರ್ಶವಾದಿ ದೇವೇಂದ್ರ ಎಂಬುದು ಅಂತ ಇನ್ನೂ ಯಾರೂ ಹೇಳಿಲ್ವಾ ಎಂಬುದು ಇನ್ನೊಂದು ಟ್ರೋಲ್, ಚಾಣಕ್ಯನ ಕೈಗೆಟುಕದ ಮಹಾ ಕುದುರೆಗಳು ಎಂದು ಮತ್ತೊಂದು ಟ್ರೋಲ್ ಕಾಣುತ್ತಿದೆ. ಒಟ್ಟಿನಲ್ಲಿ ಬಿಜೆಪಿಗೂ ಅಧಿಕಾರವೇ ಮುಖ್ಯ ಎಂಬುದು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುವ ಅಭಿಪ್ರಾಯ.
ಶಿವಸೇನೆ ಅಧಿಕಾರಕ್ಕಾಗಿ ತನ್ನ ಸಿದ್ಧಾಂತಗಳನ್ನು ಬಿಟ್ಟು ಕಾಂಗ್ರೆಸ್, ಎನ್ ಸಿ ಪಿ ಜೊತೆ ಸೇರಿಕೊಂಡಿದೆ ಎನ್ನುತ್ತಾ ಬಿಜೆಪಿಯೂ ಅದೇ ಹಾದಿಯಲ್ಲಿ ಸಾಗಿ ಅಧಿಕಾರವೇ ಮುಖ್ಯವೆಂದು ಹೇಳಿದೆ ಎಂಬುದು ಒಂದು ಕಡೆ ಕೇಳಿಬಂದರೆ, ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸದೊಂದು ಶಕೆ ಆರಂಭವಾಗಲಿದೆ ಎಂಬುದೂ ಕೇಳಿಬರುವ ಇನ್ನೊಂದು ವಿಶ್ಲೇಷಣೆ.